ಗುಲ್ಬರ್ಗ: ಜಿಲ್ಲೆಯ ಸೇಡಂ ತಾಲ್ಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಪ್ರತಿವರ್ಷ ಕೊಡುವ ರಾಜ್ಯಮಟ್ಟದ ಅಮ್ಮ ಪ್ರಶಸ್ತಿಗೆ ಈ ಸಲ ಐದು ಲೇಖಕರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಹಿರಿಯ ಕವಿ ಬಿ.ಆರ್.ಲಕ್ಷ್ಮಣರಾವ ಅವರ ‘ಮಣಿಮಾಲೆ’ (ವ್ಯಕ್ತಿಚಿತ್ರ ಬರಹಗಳ ಸಂಕಲನ), ‘ಪ್ರಜಾವಾಣಿ’ ಸಹ ಸಂಪಾದಕಿ ಸಿ.ಜಿ.ಮಂಜುಳಾ ಅವರ ‘ಮಾತುಕತೆ’ (ಲೇಖನಗಳ ಸಂಕಲನ), ಮಕ್ಕಳ ಕವಿ ರಾಜಶೇಖರ ಕುಕುಂದಾ ಅವರ ‘ಪುಟಾಣಿ ಪ್ರಾಸಗಳು’ (ಮಕ್ಕಳ ಕವಿತೆಗಳು), ಸಂಶೋಧಕಿ ಡಾ.ಜಯದೇವಿ ಧಾರವಾಡ ಅವರ ‘ವಚನ ಸಂಗೀತ ರತ್ನ ಪಂಡಿತ ಸಿದ್ದರಾಮ ಜಂಬಲದಿನ್ನಿ’ (ಸಂಶೋಧನಾ ಕೃತಿ), ಸೃಜನ್ ಹೊಸಪೇಟೆ ಅವರ ‘ನನ್ನಿಷ್ಟ (ಅನುವಾದ) ಕೃತಿಗಳನ್ನು ೧೩ನೇ ವರ್ಷದ ಅಮ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಬಾರಿ ಒಟ್ಟು ೩೧೬ ಕೃತಿಗಳು ಬಂದಿದ್ದವು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಸಂಸ್ಥಾಪಕ ಮಹಿಪಾಲ ರೆಡ್ಡಿ ಮುನ್ನೂರ್ ಹೇಳಿದರು.
ಪ್ರಶಸ್ತಿಯು ತಲಾ ₨೫೦೦೦ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿದೆ.
ನ.೨೬ರಂದು ಸಂಜೆ ೫.೩೦ಕ್ಕೆ ಸೇಡಂ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಅಮ್ಮ ಗೌರವ ಪುರಸ್ಕಾರ: ನಾಡು-ನುಡಿಗೆ ನೀಡಿದ ಕೊಡುಗೆ ಗುರುತಿಸಿ ಮೂರು ವರ್ಷಗಳಿಂದ ‘ಅಮ್ಮ ಗೌರವ ಪುರಸ್ಕಾರ’ ನೀಡಲಾಗುತ್ತಿದೆ. ಈ ಬಾರಿಯ ಪುರಸ್ಕಾರಕ್ಕೆ ಹೋರಾಟಗಾರ, ಮಾಜಿ ಸಚಿವ ವೈಜನಾಥ ಪಾಟೀಲ, ಹಿರಿಯ ಲೇಖಕ ಎಸ್.ಜಿ.ಸಿದ್ದರಾಮಯ್ಯ ತುಮಕೂರು, ಲೇಖಕಿ ಬಾನು ಮುಷ್ತಾಕ್ ಹಾಸನ, ಪ್ರಕಾಶಕ ಪ್ರಕಾಶ ಕಂಬತ್ತಳ್ಳಿ ಬೆಂಗಳೂರು ಮತ್ತು ಸೇಡಂನ ಡಾ.ಶಾಂತವೀರ ಸುಂಕದ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.