ಬೆಂಗಳೂರು: ಸಂಶೋಧಕ ಪ್ರೊ. ಷ. ಶೆಟ್ಟರ್, ವಿಮರ್ಶಕಿ ಬಿ.ಎನ್. ಸುಮಿತ್ರಾ ಬಾಯಿ ಹಾಗೂ ಲೇಖಕ ಡಾ. ನಾ. ಮೊಗಸಾಲೆ ಅವರಿಗೆ 2015ನೇ ಸಾಲಿನ ‘ಮಾಸ್ತಿ’ ಪ್ರಶಸ್ತಿಯನ್ನು ಶನಿವಾರ ನಗರದಲ್ಲಿ ಪ್ರದಾನ ಮಾಡಲಾಯಿತು.
ಈ ಮೂವರಿಗೆ ಕ್ರಮವಾಗಿ ಸಂಶೋಧನೆ, ವಿಮರ್ಶೆ ಹಾಗೂ ಸೃಜನಶೀಲ ಬರವಣಿಗೆಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಒಳಗೊಂಡಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ ಪ್ರಶಸ್ತಿ ಸಮಿತಿ ಮತ್ತು ಡಾ. ಮಾಸ್ತಿ ಟ್ರಸ್ಟ್ ಕೋಲಾರ ಜಂಟಿಯಾಗಿ ಈ ಪ್ರಶಸ್ತಿ ನೀಡಿವೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಷ. ಶೆಟ್ಟರ್ ಅವರು, ‘ಸಂಶೋಧನೆಗೆ ಅದರದ್ದೇ ಆದ ಒಂದು ಭಾಷೆ ಇದೆ. ಆ ಭಾಷೆ ಪಳಗಿಸಿಕೊಳ್ಳದ ಹೊರತು ಉತ್ತಮ ಕೃತಿ ಕೊಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಸಂಸ್ಕೃತ ಭಾಷೆ ತನ್ನದೆ ಲಿಪಿ ಹೊಂದಿರಲಿಲ್ಲ ಎಂದು ಈ ಹಿಂದೊಮ್ಮೆ ನಾನು ಹೇಳಿದ್ದೆ. ಆಗ ನನ್ನನ್ನು ಸಂಸ್ಕೃತ, ಬ್ರಾಹ್ಮಣರು ಹಾಗೂ ಪರಂಪರೆಯ ವಿರೋಧಿ ಎಂದು ಟೀಕಿಸಲಾಗಿತ್ತು. ಇದರಿಂದ ನಾನು ಹೆಚ್ಚಿನ ಸಂಶೋಧನೆ, ಪುನರ್ ಪರಿಶೀಲನೆ ಮಾಡಿದೆ. ಹಾಗಾಗಿ ಇನ್ನೂ ಅನೇಕ ಹೊಸ ಹೊಳಹುಗಳು ದೊರೆತವು’ ಎಂದರು.
‘ಇಂದು ಕಣ್ಣು ತೆರೆಸುವ ಸಂಶೋಧನೆಯ ಅಗತ್ಯವಿದೆ. ಅದಕ್ಕೆ ಇತ್ತೀಚಿನ ದಿನಗಳಲ್ಲಿ ಮನ್ನಣೆ ಸಿಗುತ್ತಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನವರು ತೊಡಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದರು.
ಅಭಿನಂದನ ಭಾಷಣ ಮಾಡಿದ ವಿಮರ್ಶಕ ಎಸ್.ಆರ್. ವಿಜಯ ಶಂಕರ ಅವರು, ‘ಶೆಟ್ಟರ್ ಅವರು ಶಾಸನಗಳ ಮರು ವ್ಯಾಖ್ಯಾನ ಮಾಡಿದರೆ, ಸುಮಿತ್ರಾಬಾಯಿ ಅವರು ಸ್ತ್ರೀವಾದದ ಬಗ್ಗೆ ತಿಳಿವಳಿಕೆ ಮೂಡಿಸಿದವರು. ಇನ್ನೂ ಮೊಗಸಾಲೆ ಅವರು ಗಡಿ ಭಾಗದಲ್ಲಿ ಕನ್ನಡದ ಪರಿಚಾರಿಕೆ ಮಾಡಿದವರು’ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅವರು, ‘ಮಾಸ್ತಿ ಅವರು ಬೇಂದ್ರೆ ಅವರ ಸಾಹಿತ್ಯವನ್ನು ಗುರುತಿಸಿ ಹಳೆ ಮೈಸೂರಿನವರಿಗೆ ಪರಿಚಯ ಮಾಡಿ ಕೊಟ್ಟಿದ್ದರು. ಅಂತಹ ದೊಡ್ಡ ವ್ಯಕ್ತಿತ್ವ ಅವರದಾಗಿತ್ತು’ ಎಂದರು.
‘ಸಾಹಿತ್ಯದ ಮೂಲಕ ಕನ್ನಡಿಗರ ಮನಸ್ಸು ತಿದ್ದಿದವರು ಮಾಸ್ತಿ’ ಎಂದು ಬಿ.ಎನ್. ಸುಮಿತ್ರಾಬಾಯಿ ಅವರು ಹೇಳಿದರು. ಲೇಖಕ ಡಾ. ನಾ. ಮೊಗಸಾಲೆ ಅವರು ಮಾತನಾಡಿ, ‘ಮಾಸ್ತಿ ಅವರು ಇಡೀ ಕನ್ನಡನಾಡಿನ ಅಂತಃಕರಣ’ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ ಜಿ.ಎಸ್. ಸಿದ್ಧಲಿಂಗಯ್ಯ ಅವರು, ‘ಮಾಸ್ತಿಯವರು ಸಾಹಿತ್ಯದ ಜೊತೆಗೆ ವ್ಯಕ್ತಿಯಾಗಿಯೂ ದೊಡ್ಡವರಾಗಿದ್ದರು’ ಎಂದು ವರ್ಣಿಸಿದರು.
ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್. ವೆಂಕಟಾಚಲಪತಿ ಹಾಗೂ ಸಮಿತಿ ಕಾರ್ಯದರ್ಶಿ ಗೀತಾ ರಾಮಾನುಜಮ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
₹ 8 ಕೋಟಿ ವೆಚ್ಚದಲ್ಲಿ ‘ಮಾಸ್ತಿ’ ಭವನ
‘ನಗರದ ಉಲ್ಲಾಳ ಮುಖ್ಯರಸ್ತೆ ಸಮೀಪ ಟ್ರಸ್ಟ್‌ಗೆ ಸೇರಿದ ಅರ್ಧ ಎಕರೆ ಜಮೀನಿನಲ್ಲಿ ಮಾಸ್ತಿ ಭವನ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ಕೋಲಾರ ಡಾ. ಮಾಸ್ತಿ ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ‘300 ಆಸನಗಳ ಸಭಾಂಗಣ, ಗ್ರಂಥಾಲಯ ಸೇರಿದಂತೆ ಇತರ ಸೌಕರ್ಯಗಳಿರುವ ಭವನ ನಿರ್ಮಾಣಕ್ಕೆ ಅಂದಾಜು ₹ 8 ಕೋಟಿ ಖರ್ಚು ಬರಲಿದೆ’ ಎಂದರು.
‘ಈ ಸಂಬಂಧ ನೆರವು ನೀಡಬೇಕು ಎಂದು ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿತ್ತು. ₹ 1 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರದ ಕಡೆಯಿಂದ ಟಿಪ್ಪಣಿ ಸಿಕ್ಕಿದೆ. ಆದರೆ, ಇಲ್ಲಿಯವರೆಗೆ ಟ್ರಸ್ಟ್‌ಗೆ ಹಣ ಬಂದಿಲ್ಲ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.