ADVERTISEMENT

‘ಖುಷಿ’ ಕೊಟ್ಟರೆ ಇಲ್ಲಿ ಎಲ್ಲವೂ ಲಭ್ಯ

ಆಸ್ಪತ್ರೆ ಅವ್ಯವಸ್ಥೆ– ಬೆಳಗಾವಿ

ಶ್ರೀಪಾದ ಯರೇಕುಪ್ಪಿ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST

ಬೆಳಗಾವಿ: ಹಣದ ದಾಹ ಕೊಂಚ ಕಡಿಮೆ­ಯಿದ್ದರೂ, ‘ಖುಷಿ’ ಎಂಬ ಪದಕ್ಕೆ ಬರವಿಲ್ಲ. ಹಣ ನೀಡುವಂತೆ ನೇರವಾಗಿ ಪೀಡಿಸದಿದ್ದರೂ, ‘ಖುಷಿ’ ಎಂಬ ಪದದ ಮೂಲಕ ಹಣ ಹಾಗೂ ಸಿಹಿ ತಿನಿಸು ಪಡೆಯುವುದನ್ನು ಬಿಡುವುದಿಲ್ಲ. ಸಹಜ ಅಥವಾ ಸಿಜೆೇರಿಯನ್‌ ಹೆರಿಗೆ ಆದರೂ, ಮನೆಗೆ ಹೋಗುವಾಗಲೇ ‘ಮಡಿಲು ಕಿಟ್‌’ ದೊರೆ­ಯುವುದು. ಆಸ್ಪತ್ರೆಯಲ್ಲಿ­ರುವವರೆಗೆ ನವಜಾತ ಶಿಶುಗಳನ್ನು ಬೆಡ್‌ಶೀಟ್‌ಗಳಲ್ಲಿ ಸುತ್ತಿಟ್ಟು ಮಲಗಿ­ಸುವುದು ಸಾಮಾನ್ಯ.

ಇದು ಬೆಳಗಾವಿ ಜಿಲ್ಲಾ ಆಸ್ಪತ್ರೆ­ಯಲ್ಲಿನ ಇಂದಿನ ಸ್ಥಿತಿ. ಮೊದಲು ಸಿವಿಲ್‌ ಆಸ್ಪತ್ರೆ ಆಗಿದ್ದ ಇದು, 2006ರ ನಂತರ ಬೆಳಗಾವಿ ವೈದ್ಯಕೀಯ ವಿಜ್ಞಾನ

ಸಂಸ್ಥೆಯೊಂದಿಗೆ (ಬಿಮ್ಸ್‌) ಸಂಯೋ­ಜನೆ­­ಗೊಂಡಿದೆ. ಸಿವಿಲ್‌ ಆಸ್ಪತ್ರೆ ಎಂದಿದ್ದಾಗ ಇಲ್ಲಿ ಪ್ರತಿಯೊಂದಕ್ಕೂ ಹಣ ನೀಡಬೇಕಾ­ಗುತ್ತಿತ್ತು. ಆದರೆ, ಈಗ ಅಂಥ ಪರಿಸ್ಥಿತಿ ಇಲ್ಲ.

ಅತ್ಯಂತ ಹಳೆಯ ಕಟ್ಟಡವಿದ್ದರೂ ವಾರ್ಡ್‌ ಒಳಗೆ ಸ್ವಚ್ಛತೆ ಇದೆ. ಹೊರಗಿನ ಆವರಣ ಮಾತ್ರ ಗಬ್ಬೆದ್ದಿದೆ. ವಾರ್ಡೊಳಗೆ ಸೊಳ್ಳೆ ಕಾಟ ತಪ್ಪಿಲ್ಲ. ಆಸ್ಪತ್ರೆ ಆವರಣದಲ್ಲಿ ಎಲ್ಲೆಂದರಲ್ಲಿ ಮಲ ವಿಸರ್ಜನೆ, ಹಂದಿಗಳ ಹಾವಳಿಯ ದೃಶ್ಯ ಸಾಮಾನ್ಯ.

ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಕಟ್ಟಡ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಅಲ್ಲಲ್ಲಿ ನೀರು ಸೋರು­ತ್ತದೆ. ಈ ವಿಭಾಗದಲ್ಲಿ ಸ್ವಚ್ಛತೆಗೆ ಅಷ್ಟೇನೂ ಮಹತ್ವ ನೀಡಿಲ್ಲ.

ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಹೆರಿಗೆಗೆ ಬರುವವರಿಂದ ಮಾತ್ರ ‘ಖುಷಿ’ ಪಡೆಯುವ ಸಿಬ್ಬಂದಿ, ಉಳಿದ ರೋಗಿಗಳಿಗೆ ಯಾವುದೇ ಕಿರಿಕಿರಿ ನೀಡುತ್ತಿಲ್ಲ ಎಂಬ ಅಭಿ­ಪ್ರಾಯ ಕೇಳಿಬಂದಿತು. ‘ಬಿಮ್ಸ್’ ಜತೆ ಸಂಯೋಜನೆ­ಗೊಂಡ ನಂತರ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾ­ಗಿದೆ. ಎಲ್ಲ ಸೌಲಭ್ಯಗಳು ಹಾಗೂ ಸೇವೆ ಸಿಗುತ್ತಿರುವುದೇ ಇದಕ್ಕೆ ಕಾರಣ.

ಆಸ್ಪತ್ರೆಯಲ್ಲಿ 500 ಬೆಡ್‌ಗಳಿಗೆ ನೀಡುವ ಸೇವೆಗೆ ಮಾತ್ರ ಸಾಕಾಗುವಷ್ಟು ಸಿಬ್ಬಂದಿ ಇದೆ. ಆದರೆ, ಈ ಆಸ್ಪತ್ರೆ 840 ಬೆಡ್‌ ಒಳಗೊಂಡಿದ್ದು, ಸಿಬ್ಬಂದಿ ಕೊರತೆ ಇದೆ. 60 ಬೆಡ್‌ಗಳ ಹೆರಿಗೆ ವಾರ್ಡ್ ಇದ್ದರೂ, ಇಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ (ಎನ್‌ಆರ್‌ಎಚ್‌ಎಂ) ಅಡಿಯಲ್ಲಿ  240 ಬೆಡ್‌ಗಳ ಸೌಲಭ್ಯ ಒದಗಿಸಲಾಗಿದೆ.

‘ನನ್ನ ಮಗಳು ಗಂಡು ಕೂಸು ಹೆತ್ತಿದ್ದಾಳೆ. ‘ಖುಷಿ’ ಕೇಳಿದರು, ಕೊಟ್ಟಿದ್ದೇವೆ. ಕೂಸು ಹುಟ್ಟಿ ನಾಲ್ಕು ದಿವಸವಾದರೂ ಮಡಿಲು ಕಿಟ್‌ ನೀಡಿಲ್ಲ. ಕಚೇರಿಗೆ ಹೋಗಿ ಅವರು ನೀಡುವ ಪೇಪರ್‌ನಲ್ಲಿ ಬರೆದ ನಂತರವೇ ಕಿಟ್‌ ನೀಡುತ್ತಾರಂತೆ. ಆದರೆ, ಕಚೇರಿಗೆ ಹೋದರೂ ಇನ್ನೂವರೆಗೆ ಪೇಪರ್‌ ಕೊಟ್ಟಿಲ್ಲ. ಮನೆಗೆ ಹೋಗುವಾಗ ಕಿಟ್‌ ನೀಡುತ್ತೇವೆ ಎಂದಿದ್ದಾರೆ’ ಎಂದು ತಾಲ್ಲೂಕಿನ ಕಣಬರ್ಗಿಯ ಸುಮಿತ್ರಾ ಹೇಳಿದರು.

‘ಮೊಮ್ಮಗಾ ಹುಟ್ಯಾನ ತಮ್ಮಾ, ಆದ್ರ ಇನ್ನೂವರೆಗೂ ಬೆಡ್‌ ಕೊಟ್ಟಿಲ್ಲಾ. ಅದಕ್ಕಾಗಿ ಕೂಸು ಹಿಡ್ಕೊಂಡು ಇಲ್ಲೇ ಕುಂತೇನಿ. ಕೂಸನ್ನು ತಾಯಿಗೆ ತೋರಿಸಾದ್ಮ್ಯಾಲೆ ಬೆಡ್‌ ಕೊಡ್ತಾರಂತ. ಕೂಸಿನ ಮಾರಿ ತೋರಿಸಾಕ್‌ ದುಡ್ಡ ಕೇಳಿಲ್ಲ’ ಎಂದು ನವಜಾತ ಶಿಶುವನ್ನು ತಮ್ಮ ಮಡಿಲಲ್ಲಿ ಸೀರೆ ಸೆರಗು ಹೊಚ್ಚಿಕೊಂಡು ಆಸ್ಪತ್ರೆಯ ಕಾರಿಡಾರ್‌ನಲ್ಲಿ ಕುಳಿತಿದ್ದ ತಾಲ್ಲೂಕಿನ ಹವಲಾಪುರ ಗ್ರಾಮದ 70 ವರ್ಷದ ವೃದ್ಧೆ ಸತ್ಯವ್ವ ತಿರುವಗೋಳ ಅಭಿಪ್ರಾಯಪಟ್ಟಳು.

‘ಆಸ್ಪತ್ರೆಯಲ್ಲಿ ಯಾವುದೇ ತೊಂದರೆ ಇಲ್ಲ. ಬಿಪಿಎಲ್‌ ಕಾರ್ಡ್‌ ಇಲ್ಲದಿದ್ದರೆ ಮಾತ್ರ ಶುಲ್ಕ ನೀಡಬೇಕಾಗುತ್ತದೆ. ಎಲ್ಲಾ ಗುಳಿಗಿ ಆಸ್ಪತ್ರೆಯವರೇ ಕೊಟ್ಟಾರ’ ಎಂದು ತಮ್ಮ ಪತ್ನಿಯ ಶಸ್ತ್ರಚಿಕಿತ್ಸೆಗೆ ಆಗಮಿಸಿದ್ದ ಹುಕ್ಕೇರಿ ತಾಲ್ಲೂಕಿನ ಶಿರೂರು ಗ್ರಾಮದ ರೈತ ಭೀಮಪ್ಪ ಹೇಳಿದರು.

‘ಈ ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಹೆಚ್ಚಿನ ಹಣ ನೀಡಬೇಕಿತ್ತು. ಆದರೆ, ಜಿಲ್ಲಾ ಆಸ್ಪತ್ರೆ­ಯಲ್ಲಿ ಈ ಘಟಕ ಆರಂಭವಾದಾಗಿನಿಂದ ನಮಗೆ ಬಹಳ ಅನುಕೂಲವಾಗಿದೆ. ಬಿಪಿಎಲ್‌ ಕಾರ್ಡು ಇದ್ದವರಿಗೆ ರೂ 400 ಹಾಗೂ ಎಪಿಎಲ್‌ದವರಿಗೆ ರೂ 800 ಚಾರ್ಜ್ ಮಾಡುತ್ತಾರೆ’ ಎಂದು ರೋಗಿಯೊಬ್ಬರು ತಮ್ಮ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT