ಬೆಂಗಳೂರು: ‘ಮಕ್ಕಳನ್ನು ಕನ್ನಡದಲ್ಲೇ ಓದಿಸಬೇಕು. ಮಾತೃಭಾಷೆ ಮೂಲಕ ವಿಷಯ ಗ್ರಹಿಸಿಕೊಳ್ಳುವುದು ತುಂಬಾ ಸುಲಭ. ಹೀಗಾಗಿ ವಿಜ್ಞಾನವನ್ನು ಕನ್ನಡದಲ್ಲೇ ಕಲಿತೆ. ನನ್ನ ಸಾಧನೆಗೆ ಕನ್ನಡದ ಹಿನ್ನೆಲೆಯೇ ಕಾರಣ’
–ಭಾರತ ರತ್ನ ಪುರಸ್ಕಾರಕ್ಕೆ ಭಾಜನರಾದ ರಸಾಯನ ವಿಜ್ಞಾನಿ ಪ್ರೊ. ಸಿಎನ್‌ಆರ್ ರಾವ್ ರಾಜ್ಯದ ಜನತೆಗೆ ಕೊಟ್ಟ ಸಂದೇಶ ಇದು. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಆವರಣದಲ್ಲಿರುವ ತಮ್ಮ ಮನೆಯಲ್ಲಿ ಭಾನುವಾರ ಅವರು ಮಾಧ್ಯಮ ಸಂವಾದ-ದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಕನ್ನಡದಲ್ಲಿ ಓದಿಸಿದರೆ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಕ್ಕಳಿಗೆ ತೊಂದರೆ ಆಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಬದಲಾಗಿ ಯಾವುದೇ ವಿಷಯದ ಮೇಲೆ ಆಳವಾದ ಜ್ಞಾನ ಹೊಂದಲು ಅದರಿಂದ ನೆರವಾಗುತ್ತದೆ. ಹೈಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದ ನಮ್ಮಪ್ಪ ನನಗೆ ಕನ್ನಡದಲ್ಲೇ ಶಿಕ್ಷಣ ಕೊಡಿಸಿದರು’ ಎಂದು ಹೇಳಿದರು.
‘ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರ ವಿಜ್ಞಾನವೇ ಅಲ್ಲ. ಜೈವಿಕ ತಂತ್ರಜ್ಞಾನದಲ್ಲಿ ಚೂರು–ಪಾರು ವಿಜ್ಞಾನವಿದೆ. ಐ.ಟಿ ಕ್ಷೇತ್ರವನ್ನು ಸೇರಿ, ದುಡ್ಡಿನ ಬೆನ್ನುಹತ್ತಿದ ಯುವಕರು ಗೋಳೋ ಎನ್ನುತ್ತಿದ್ದಾರೆ. ವಿಜ್ಞಾನದ ಮೇಲೆ ಪ್ರೀತಿ ಇಟ್ಟುಕೊಂಡ ನಾನು, 80 ವರ್ಷದ ಅಜ್ಜ, ಆನಂದವಾಗಿದ್ದೇನೆ. ನಾನು ಸಂತೃಪ್ತವಾಗಿರಲು ಪ್ರಶಸ್ತಿ–ದುಡ್ಡು ಏನೂ ಬೇಕಾಗಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಯಾವುದೇ ದೇಶದ ಭವಿಷ್ಯ ಅಲ್ಲಿನ ವಿಜ್ಞಾನ ಕ್ಷೇತ್ರದ ಬೆಳವಣಿಗೆಯನ್ನೇ ನೇರವಾಗಿ ಅವಲಂಬಿಸಿದೆ’ ಎಂದ ಅವರು, ‘ಅಮೆರಿಕ, ಚೀನಾ, ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳು ನಾಗಾಲೋಟದಿಂದ ಹೆಜ್ಜೆ ಹಾಕಲು ಸಂಶೋಧನಾ ಕ್ಷೇತ್ರದಲ್ಲಿ ಅವುಗಳು ತೊಡಗಿಸುತ್ತಿರುವ ಅಪಾರ ಹಣವೇ ಕಾರಣ’ ಎಂದು ವಿಶ್ಲೇಷಿಸಿದರು.
‘ಯಾವುದೇ ಕ್ಷೇತ್ರದಲ್ಲಿ ಹಣ ತೊಡಗಿಸುವಾಗ ಮುಂದಿನ ನೂರು ವರ್ಷಗಳ ಗುರಿ ಇರಬೇಕು. ಸಂಶೋಧನೆ ಮತ್ತು ಶಿಕ್ಷಣದಿಂದ ದೇಶದಲ್ಲಿ ಬದಲಾವಣೆ ಸಾಧ್ಯ. ನಮ್ಮ ದೇಶ ನಿವ್ವಳ ಆಂತರಿಕ ಉತ್ಪನ್ನದ ಶೇ 6ರಷ್ಟು ಹಣವನ್ನು ಮಾತ್ರ ನಾವು ಈ ಕ್ಷೇತ್ರಗಳಲ್ಲಿ ತೊಡಗಿಸುತ್ತಿದ್ದೇವೆ’ ಎಂದು ವಿಷಾದಿಸಿದರು.
‘ವಿಜ್ಞಾನದ ವಿಷಯ ಎತ್ತಿದರೆ ಋಣಾತ್ಮಕ ಅಂಶಗಳಿಗೇ ಮಹತ್ವ ಸಿಗುತ್ತದೆ. ಆಗಿರುವ ಸಾಧನೆಗಳು ಕಣ್ಣಿಗೇ ಕಾಣುವುದಿಲ್ಲ. ಕಲ್ಪಾಕಂ ಅಣು ವಿದ್ಯುತ್ ಸ್ಥಾವರ ಇನ್ನು ನಾಲ್ಕು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ. ಐದು ಕಡೆ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಗಳನ್ನು ಆರಂಭಿಸಿದ್ದೇವೆ. ದೊಡ್ಡ ಕಂಪ್ಯೂಟರ್ ನಿರ್ಮಾಣದಲ್ಲೂ ದಾಪುಗಾಲು ಇಟ್ಟಿದ್ದೇವೆ. ಮಂಗಳನ ಅಂಗಳದತ್ತ ಉಪಗ್ರಹ ಹಾರಿಸಿದ್ದೇವೆ’ ಎಂದು ಸಾಧನೆ ಪಟ್ಟಿ ಮಾಡಿದರು.
‘ನಮ್ಮ ಶಿಕ್ಷಣ ಸಂಸ್ಥೆಗಳನ್ನು ನಾವು ದೊಡ್ಡ ಬಾಜಾ–ಭಜಂತ್ರಿಯೊಂದಿಗೆ ಶುರು ಮಾಡುತ್ತೇವೆ. ಆಮೇಲೆ ಗುಣಮಟ್ಟ ಕಾಯ್ದುಕೊಳ್ಳದೆ ಅವು ಠುಸ್ ಎನ್ನುತ್ತವೆ.
ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 800 ವರ್ಷಗಳ ಬಳಿಕವೂ ಅದೇ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. ನಮಗೂ ಅಂತಹ ಸಂಸ್ಥೆಗಳು ಬೇಕಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.