ಬೆಂಗಳೂರು: ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಲಾಗುತ್ತಿರುವ ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಷಿಪ್ 2015–16’ ಕುತೂಹಲದ ಘಟ್ಟ ತಲುಪಿದ್ದು, ಶನಿವಾರ (ಜ. 16) ಫೈನಲ್ ಸ್ಪರ್ಧೆ ನಡೆಯಲಿದೆ.
ವಿದ್ಯಾರ್ಥಿಗಳ ಮಿದುಳಿಗೊಂದಿಷ್ಟು ಕಚಗುಳಿ ಇಡುವ ಉದ್ದೇಶದಿಂದ ‘ಪ್ರಜಾವಾಣಿ’ ಈ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದ್ದು, ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್ ಪ್ರಾಯೋಜಕತ್ವ ವಹಿಸಿದೆ. ಈಗಾಗಲೇ ಮಂಗಳೂರು, ಮೈಸೂರು, ಹುಬ್ಬಳ್ಳಿ– ಧಾರವಾಡ, ಬಾಗಲಕೋಟೆ, ಕಲಬುರ್ಗಿ, ರಾಯಚೂರು, ದಾವಣಗೆರೆ ವಲಯಮಟ್ಟದ ಸ್ಪರ್ಧೆಗಳು ನಡೆದಿವೆ.
ಬೆಂಗಳೂರಿನ ಅರಮನೆ ರಸ್ತೆಯ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಧ್ಯಾಹ್ನ 1.45ಕ್ಕೆ ಫೈನಲ್ ಸ್ಪರ್ಧೆ ನಡೆಯಲಿದೆ. ಅದಕ್ಕೂ ಮುನ್ನ ಬೆಳಿಗ್ಗೆ 10ಕ್ಕೆ ಬೆಂಗಳೂರು ವಲಯಮಟ್ಟದ ರಸಪ್ರಶ್ನೆ ಸ್ಪರ್ಧೆ ಆರಂಭಗೊಳ್ಳಲಿದೆ. 20 ಪ್ರಶ್ನೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಅದರಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಆರು ತಂಡಗಳು ರಸಪ್ರಶ್ನೆಗೆ ಆಯ್ಕೆಯಾಗುತ್ತವೆ. ಅದರಲ್ಲಿ ಒಂದು ತಂಡ ಅಂತಿಮ ಸುತ್ತಿಗೆ ಪ್ರವೇಶಿಸುತ್ತದೆ.
ವಲಯಮಟ್ಟದ ಸ್ಪರ್ಧೆಗೆ ಈಗಾಗಲೇ 600 ತಂಡಗಳು ನೋಂದಾಯಿಸಿವೆ. ಶನಿವಾರವೂ ಬೆಳಿಗ್ಗೆ 8ರಿಂದ 10ರವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ವಿನಯ್ ಮೊದಲಿಯಾರ್ ಕ್ವಿಜ್ ಮಾಸ್ಟರ್ ಆಗಿ ಭಾಗವಹಿಸಲಿದ್ದಾರೆ.
ಚಿತ್ರ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ಫೈನಲ್ ಸ್ಪರ್ಧೆಯ ಹಣಾಹಣಿಯಲ್ಲಿ ಕ್ವಿಜ್ ಮಾಸ್ಟರ್ ಆಗಿ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಭಾಗವಹಿಸಲಿದ್ದಾರೆ. ಫೈನಲ್‌ನಲ್ಲಿ ಎಂಟು ತಂಡಗಳು (16 ವಿದ್ಯಾರ್ಥಿಗಳು) ಭಾಗವಹಿಸಲಿವೆ.
ಬಹುಮಾನ ಏನೇನು?
ಮೊದಲನೇ ಬಹುಮಾನ: ತಂಡದ ಇಬ್ಬರಿಗೂ ತಲಾ ₹25 ಸಾವಿರ ನಗದು
ಎರಡನೇ ಬಹುಮಾನ: ತಂಡದ ಇಬ್ಬರಿಗೂ ತಲಾ ₹10 ಸಾವಿರ ಬೆಲೆಯ ಟ್ಯಾಬ್
ಮೂರನೇ ಬಹುಮಾನ: ತಂಡದ ಇಬ್ಬರಿಗೂ ತಲಾ ₹5 ಸಾವಿರ ಬೆಲೆಯ ಮೊಬೈಲ್ ಫೋನ್.
ನಾಲ್ಕನೇ ಬಹುಮಾನ: ತಂಡದ ಇಬ್ಬರಿಗೂ ತಲಾ ₹2 ಸಾವಿರ ಬೆಲೆಯ ಗಿಫ್ಟ್ ವೋಚರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.