ADVERTISEMENT

‘ಮುಖ್ಯಮಂತ್ರಿ, ಹೈಕಮಾಂಡ್ ತೀರ್ಮಾನದಿಂದ ಸಚಿವ ಸ್ಥಾನ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 19:30 IST
Last Updated 1 ಜನವರಿ 2014, 19:30 IST

ಬೆಂಗಳೂರು: ‘ನನಗೆ ಸಚಿವ ಸ್ಥಾನ ನೀಡುವ ತೀರ್ಮಾನ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಅವರದ್ದು. ಪ್ರಮಾಣ ವಚನ ಸ್ವೀಕರಿಸುವಂತೆ ಸಿದ್ದರಾಮಯ್ಯ ಅವರೇ ನನಗೆ ಆಹ್ವಾನ ನೀಡಿದರು’ ಎಂದು ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದರು.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರು ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿ­ಗೋಷ್ಠಿ ನಡೆಸಿದರು. ‘ಹೈಕಮಾಂಡ್ ತೀರ್ಮಾನದ ಕಾರಣ ನಿಮಗೆ ಸಚಿವ ಸ್ಥಾನ ದೊರೆಯಿತೇ’ ಎಂಬ ಪ್ರಶ್ನೆಗೆ, ‘ಸಚಿವ ಸ್ಥಾನವನ್ನು ಯಾರಿಗೇ ಕೊಡುವುದಿದ್ದರೂ ಆ ಕುರಿತ ತೀರ್ಮಾನವನ್ನು ಪಕ್ಷ ಮತ್ತು ಮುಖ್ಯಮಂತ್ರಿಯವರೇ ಕೈಗೊಳ್ಳು­ತ್ತಾರೆ’ ಎಂದು ಉತ್ತರಿಸಿದರು.

‘ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಆಗಿದ್ದವರು ನೀವು. ಈಗ ಸಚಿವ ಸ್ಥಾನಕ್ಕೆ ತೃಪ್ತಿ ಹೊಂದಿದ್ದೀರಾ?’ ಎಂದು ಕೇಳಿದಾಗ, ‘ನನಗಿಂತ ಹೆಚ್ಚಿನ ಬೆಂಬಲ ಸಿದ್ದರಾಮಯ್ಯ ಅವರಿಗೆ ಇತ್ತು. ಹಾಗಾಗಿ ಅವರು ಮುಖ್ಯಮಂತ್ರಿ­ಯಾದರು. ಈಗ ಸಿದ್ದರಾಮಯ್ಯ ಮತ್ತು ಪಕ್ಷದ ಕೈ ಬಲಪಡಿಸುವುದೇ ನನ್ನ ಗುರಿ’ ಎಂದು ಉತ್ತರಿಸಿದರು.

‘ನಿಮಗೆ ಸಚಿವ ಸ್ಥಾನ ನೀಡಿದ್ದು ನಿಮ್ಮ ಪಕ್ಷದೊಳಗೇ ಕೆಲವರಿಗೆ ಅಸಮಾಧಾನ ತಂದಿದೆಯಲ್ಲ?’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಪಕ್ಷದ ಶಾಸಕರ ಪೈಕಿ ಕೆಲವರಿಗೆ ಮಾತ್ರ ಯೋಗ ಚೆನ್ನಾಗಿರುತ್ತದೆ. ಹೊಸಬ­ರಿಗೂ ಪಕ್ಷ ಅವಕಾಶ ಕಲ್ಪಿಸಿದೆ. ನಾನೂ ಏಳು ತಿಂಗಳು ಸಂಪುಟದಿಂದ ಹೊರ­ಗಿದ್ದೆ. ಆಗ ಒಂದೂ ಮಾತನಾಡಿರಲಿಲ್ಲ. ಧರ್ಮ ಸಿಂಗ್ ಮುಖ್ಯಮಂತ್ರಿ­ಯಾದಾಗ, ನನಗೆ ಮಂತ್ರಿ ಸ್ಥಾನ ನೀಡ­ಬಾರದು ಎಂದು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ಜೆಡಿಎಸ್‌ ಷರತ್ತು ವಿಧಿಸಿತ್ತು. ಆಗಲೂ ನಾನು ಸುಮ್ಮನಿದ್ದೆ’ ಎಂದು ನೆನಪಿಸಿಕೊಂಡರು.

‘ನನಗೆ ಸಚಿವ ಸ್ಥಾನ ನೀಡಿದ್ದನ್ನು ವಿರೋಧಿಸಿ ಬಿಜೆಪಿ ಹೋರಾಟ ನಡೆಸುವುದಾದರೆ ಸ್ವಾಗತ. ನನ್ನ ಮೇಲೆ ಆರೋಪಗಳಿವೆ ಎಂಬ ಕುರಿತು ಅವರು ಚರ್ಚೆ ನಡೆಸಲಿ’ ಎಂದು ಸವಾಲೆಸೆ­ದರು. ಸಹೋದರ ಡಿ.ಕೆ. ಸುರೇಶ್ ಅವರು ಇತ್ತೀಚೆಗೆ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೂ, ತಮಗೆ ಸಚಿವ ಸ್ಥಾನ ದೊರೆತಿರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.