ADVERTISEMENT

‘ರೆಡ್‌ ಕಾರ್ನರ್‌’ ನೋಟಿಸ್‌ ಜಾರಿಗೆ ಸಿಬಿಐ ಮನವಿ

ಆನಂದ್‌ ಸಿಂಗ್‌ ಪತ್ತೆಗೆ ಕೋರಿಕೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಬಳ್ಳಾರಿಯ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್‌ ಸಿಂಗ್‌ ಅವರನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಪರಿಗಣಿಸಿ, ‘ರೆಡ್‌ ಕಾರ್ನರ್‌’ ನೋಟಿಸ್‌ ಜಾರಿಗೆ ಅನುಮತಿ ನೀಡುವಂತೆ ಸಿಬಿಐ ಅಧಿಕಾರಿ­ಗಳು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಬೇಲೆಕೇರಿ ಬಂದರಿನ ಮೂಲಕ ನಡೆದಿರುವ ಅದಿರು ಕಳ್ಳಸಾಗಣೆ ಹಗರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆನಂದ್‌ ಸಿಂಗ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ಗುರುವಾರ ನಡೆಯಿತು. ಆರೋಪಿ ಪರ ಶಾಸಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ, ಈ ಪ್ರಕರಣದಲ್ಲಿ ಮೊದಲು ಸಾಕ್ಷಿ ಎಂದು ಪರಿಗಣಿಸಿದ್ದ ಆನಂದ್‌ ಸಿಂಗ್‌ ಅವರನ್ನು ನಂತರ ಆರೋಪಿ ಎಂದು ಪರಿಗಣಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆಗ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶ ವಿ.ಶ್ರೀಶಾನಂದ ಅವರು, ಸಿಬಿಐ ‘ರೆಡ್ ಕಾರ್ನರ್‌’ ನೋಟಿಸ್‌ ಜಾರಿಗೆ ಅನು­ಮತಿ ಕೋರಿರುವ ವಿಷಯ ತಿಳಿಸಿದರು.

‘ಎಸ್‌.ಬಿ.ಲಾಜಿಸ್ಟಿಕ್ಸ್ ವಿರುದ್ಧದ ಪ್ರಕರಣದಲ್ಲಿ ಆನಂದ್‌ ಸಿಂಗ್‌ ಅವರನ್ನು ಸಾಕ್ಷಿ ಎಂದು ಹೆಸರಿಸಲಾಗಿದೆ. ಆದರೆ, ಈಗ ಅದೇ ವ್ಯಕ್ತಿಯನ್ನು ಆರೋಪಿ ಎಂದು ಸಿಬಿಐ ಹೇಳುತ್ತಿದೆ. ಅವರನ್ನು ಆರೋಪಿ ಎಂದು ಪರಿಗಣಿಸುವಂತಹ ಸಾಕ್ಷ್ಯಗಳ ಬಗ್ಗೆ ತನಿಖಾ ಸಂಸ್ಥೆ ಯಾವುದೇ ವಿವರವನ್ನೂ ಒದಗಿಸಿಲ್ಲ’ ಎಂದು ಆಚಾರ್ಯ ವಾದಿಸಿದರು.

ತಮ್ಮ ಕಕ್ಷಿದಾರರು ಪಾಲುದಾರ­ರಾಗಿರುವ ವೈಷ್ಣವಿ ಮಿನರಲ್ಸ್‌ ಕಂಪೆನಿಯುಎಸ್‌.ಬಿ.ಲಾಜಿಸ್ಟಿಕ್ಸ್‌ಗೆ ಪೂರೈಸಿರುವ ಅದಿರು ಅಕ್ರಮ ಗಣಿಗಾರಿಕೆ ಮೂಲಕ ತೆಗೆದಿರುವುದಲ್ಲ. ಈ ಎರಡೂ ಕಂಪೆನಿಗಳ ನಡುವಣ ವ್ಯವಹಾರದಲ್ಲಿ ಕಾನೂನುಬಾಹಿರ ಕೃತ್ಯ ನಡೆದಿಲ್ಲ. ಒಮ್ಮೆ ಮುಕ್ತಾಯದ ಹಂತದಲ್ಲಿದ್ದ ಪ್ರಕರಣದಲ್ಲಿ ದಿಢೀರನೆ ಆನಂದ್‌ ಸಿಂಗ್‌ ಅವರನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಎಂದರು.

‘ಪ್ರಬಲ ಸಾಕ್ಷ್ಯ ಇದೆ’: ಆರೋಪಿ ಪರ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ಕ್ರಿಮಿನಲ್‌ ಪ್ರಕರಣ­ಗಳ ತನಿಖೆಯಲ್ಲಿ ಆರೋಪಿ­ಗಳನ್ನು ಹೊಸದಾಗಿ ಸೇರಿಸುವ ಅಥವಾ ಕೈಬಿಡುವ ಅಧಿಕಾರ ತನಿಖಾಧಿಕಾರಿಗೆ ಇರುತ್ತದೆ. ತನಿಖೆ ಪೂರ್ಣಗೊಳ್ಳುವ ಮುನ್ನ ಯಾವುದೇ ಹಂತದಲ್ಲಿ ಬೇಕಿದ್ದರೂ, ಆರೋಪಿಗಳ ಪಟ್ಟಿಗೆ ಹೊಸ ಹೆಸ­ರನ್ನು ಸೇರಿ­ಸಲು ಅವಕಾಶ ಇದೆ. ತನಿಖೆಯ ಅವಧಿಯಲ್ಲಿ ಬೆಳಕಿಗೆ ಬರುವ ಸಂಗತಿಗಳು ಮತ್ತು ದೊರೆಯುವ ಸಾಕ್ಷ್ಯಗಳ ಆಧಾರದಲ್ಲಿ ಅದು ನಡೆಯುತ್ತದೆ’ ಎಂದರು.

‘ಆನಂದ್‌ ಸಿಂಗ್‌ ಅವರನ್ನು ತಲೆ­ಮರೆಸಿ­ಕೊಂಡ ಆರೋಪಿ ಎಂದು ಪರಿ­ಗಣಿಸಿ ‘ರೆಡ್‌ ಕಾರ್ನರ್‌’ ನೋಟಿಸ್‌ ಜಾರಿಗೆ ಅನುಮತಿ ಕೋರಿ ಸಿಬಿಐ ಅಧಿ­ಕಾರಿ­ಗಳು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ­ಯಲ್ಲಿ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಪ್ರಬಲವಾದ ಸಾಕ್ಷ್ಯಗಳನ್ನು ಒದಗಿಸಿ­ದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿರುವುದರಿಂದ ‘ರೆಡ್‌ ಕಾರ್ನರ್‌’ ನೋಟಿಸ್‌ ಜಾರಿಗೆ ಅನುಮತಿ ಕೋರಿರುವ ಅರ್ಜಿಯ ಸಂಬಂಧ ನ್ಯಾಯಾಲಯ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಅರ್ಜಿಯ ವಿಲೇವಾರಿ ಬಳಿಕ ಆ ಬಗ್ಗೆ ಪರಿಶೀಲಿಸ­ಲಾಗುವುದು’ ಎಂದು ವಿವರ ಒದಗಿಸಿದರು.

ನೋಟಿಸ್‌ಗೂ ಮುನ್ನ ವಿದೇಶಕ್ಕೆ’: ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಿಬಿಐ ನೋಟಿಸ್‌ ನೀಡುವ ಮುನ್ನವೇ ಆನಂದ್‌ ಸಿಂಗ್‌ ಅವರು ವಿದೇಶಕ್ಕೆ ತೆರಳಿದ್ದರು. ಅವರಿಗೆ ತುರ್ತು ಚಿಕಿತ್ಸೆಯ ಅಗತ್ಯ ಇತ್ತು. ಅವರ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನೂ ಅರ್ಜಿಯ ಜೊತೆ ಒದಗಿಸಲಾಗಿದೆ. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಅವರು ಅರ್ಹರಾಗಿದ್ದಾರೆ. ಈ ಎಲ್ಲಾ ಅಂಶಗಳನ್ನೂ ಪರಿಗಣಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಆಚಾರ್ಯ ಮನವಿ ಮಾಡಿದರು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದರು. ಸಿಬಿಐ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶುಕ್ರವಾರ ವಾದ ಮಂಡಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.