ಮೈಸೂರು: ‘ವಸ್ತ್ರಭಾಗ್ಯ’ ಯೋಜನೆ ಕುರಿತ ಪ್ರಸ್ತಾವವೇ ಇಲ್ಲ. ಸಚಿವ ಸಂಪುಟದಲ್ಲಿ ತೀರ್ಮಾನವೂ ಆಗಿಲ್ಲ. ಆದರೂ, ಜವಳಿ ಸಚಿವ ಬಾಬುರಾವ್ ಚಿಂಚನಸೂರ ಈ ಕುರಿತು ಏಕೆ ಹೇಳಿದರೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಬಗ್ಗೆ ನನಗೇನೂ ಗೊತ್ತಿಲ್ಲ’ ಎಂದರು. ರಾಜೀವ್ ಗಾಂಧಿ ಆವಾಸ್ ಯೋಜನೆ ಸ್ಥಗಿತ?: ದೆಹಲಿಯಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದಾಗ ಅವರು ರಾಜೀವ್ ಗಾಂಧಿ ಆವಾಸ್ ಯೋಜನೆ, ಸೇರಿದಂತೆ ಹಲವು ಯೋಜನೆಗಳನ್ನು ನಿಲ್ಲಿಸಲಾಗುತ್ತದೆ. ಹಾಲಿ ಇರುವ ಕಾಮಗಾರಿಗಳನ್ನು ಬೇಗ ಮುಗಿಸಿ. ಹೊಸ ಮಂಜೂರಾತಿ ಬೇಡ ಎಂದು ಹೇಳಿದ್ದಾರೆ. ಅಲ್ಲದೆ, ಯುಪಿಎ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ ಯೋಜನೆಗಳ ಹೆಸರುಗಳನ್ನು ಬದಲಿಸುತ್ತಿದ್ದಾರೆ. ಇದು ದುರುದ್ದೇಶಪೂರಿತ ರಾಜಕೀಯ ಎಂದು ಕಿಡಿಕಾರಿದರು.
‘ನರ್ಮ್’ ಯೋಜನೆಯಲ್ಲಿ ರಾಜ್ಯವು ಅತ್ಯುತ್ತಮ ಸಾಧನೆ ತೋರಿದೆ. ಸದ್ಯ, ಬಾಕಿ ಉಳಿಸಿಕೊಂಡಿರುವ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದೇನೆ. ಆದರೆ, ಅವರ ಹೊಸ ಕಾಮಗಾರಿ ಬೇಡ ಎಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸೇಡಿನ ರಾಜಕಾರಣ: ಕಾವೇರಿ ನದಿಗೆ ರಾಜ್ಯ ಕಲುಷಿತ ನೀರು ಬಿಡುತ್ತಿದೆ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿರುವುದು ಸೇಡಿನ ರಾಜಕಾರಣವೇ ಹೊರತು ಬೇರೆನಲ್ಲ. ಈ ಬಗ್ಗೆ ಕಾನೂನು ಪ್ರಕಾರವೇ ಹೋರಾಟ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜೈಲಿಗೆ ಹೋಗಿ ಬಂದವರಿಂದ ಪಾಠ!: ‘ಬಿಜೆಪಿ ನಾಯಕರಾದ ಈಶ್ವರಪ್ಪ, ಯಡಿಯೂರಪ್ಪ ಅವರು ನನ್ನನ್ನು ಜೈಲಿಗೆ ಹೋಗಬಹುದು ಎಂದಿದ್ದಾರೆ. ಜೈಲಿಗೆ ಹೋಗಿ ಬಂದವರಿಂದ ಇನ್ನೆಂಥ ಮಾತನ್ನು ನಿರೀಕ್ಷಿಸಲು ಸಾಧ್ಯ? ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಕರಣವನ್ನೂ ಸಿಬಿಐ ತನಿಖೆ ವಹಿಸಲಿಲ್ಲ. ಆದರೆ, ನಾವು ಒಂದಂಕಿ ಲಾಟರಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದೇವೆ. ಜೈಲಿಗೆ ಹೋಗಿ ಬಂದವರಿಂದ ಪಾಠ ಕಲಿಯಬೇಕಿಲ್ಲ’ ಎಂದು ಕುಟುಕಿದರು.
ಸಚಿವ ಸಂಪುಟ ವಿಸ್ತರಣೆ ಚರ್ಚಿಸಿಲ್ಲ: ಹೈಕಮಾಂಡ್ ಜತೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡಿದ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಮತಮ್ಮೆ ಚರ್ಚಿಸಬೇಕಿದೆ. ಹಾಗೆಂದು, ಮುಖ್ಯಮಂತ್ರಿಯ ಪರಮಾಧಿಕಾರವನ್ನು ಬಿಟ್ಟುಕೊಟ್ಟಿಲ್ಲ ಎಂದರು.
*
ಮುಖ್ಯಾಂಶಗಳು
* ಯುಪಿಎ ಯೋಜನೆಗಳ ಹೆಸರು ಬದಲಾವಣೆ
* ಸರ್ಕಾರ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ
* ತಮಿಳುನಾಡಿನಿಂದ ಸೇಡಿನ ರಾಜಕಾರಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.