ಬೆಳಗಾವಿ: ‘ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು, ಅಹಿಂಸೆಯ ಮಾರ್ಗದಲ್ಲಿ ನಡೆಯುತ್ತಿರುವ ಜೈನ ಧರ್ಮ ಶ್ರೇಷ್ಠ ಧರ್ಮವಾಗಿದೆ. ಇಂದಿನ ಕುಲುಷಿತ ಸಮಾಜ ತಿದ್ದಲು ಜೈನ ಧರ್ಮದ ತತ್ವಗಳು ಅಗತ್ಯ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಹಿ.ಚಿ.ಬೋರಲಿಂಗಯ್ಯ ಮಂಗಳವಾರ ಇಲ್ಲಿ ಹೇಳಿದರು.
‘ಜೈನ ಧರ್ಮದಲ್ಲಿ ಯಕ್ಷ –ಯಕ್ಷಿಯರು, ಪ್ರೇರಣೆ–-ಪರಿಕಲ್ಪನೆ’ ವಿಷಯ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭೇರಾಜ ಬಲ್ಡೋಟ ಜೈನ ಸಂಸ್ಕೃತಿ ಅಧ್ಯಯನ ಪೀಠದ ಸಹಯೋಗದಲ್ಲಿ ಇಲ್ಲಿನ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಶಯ ಭಾಷಣ ಮಾಡಿದ ಡಾ. ಹಂಪ ನಾಗರಾಜಯ್ಯ, ‘ಯಕ್ಷ –ಯಕ್ಷಿಯರು ಜೈನ ಧರ್ಮಕ್ಕೆ ಸೀಮಿತವಾಗಿಲ್ಲ. ಬೌದ್ಧ ಧರ್ಮ ಸೇರಿದಂತೆ ಎಲ್ಲ ಧರ್ಮದಲ್ಲೂ ನಾವು ಯಕ್ಷ –ಯಕ್ಷಿಯರನ್ನು ಕಾಣಬಹುದು’ ಎಂದು ಹೇಳಿದರು.
‘ಜಿನ ಶಾಸನದ ದೇವ –ದೇವತಿಯರು ಎಂದು ಗುರುತಿಸಿಕೊಂಡಿರುವ ಯಕ್ಷ–ಯಕ್ಷಿಯರ ಇತಿಹಾಸ ದೊಡ್ಡದಾಗಿದೆ. ಜೈನ ಧರ್ಮದಲ್ಲಿ ತೀರ್ಥಂಕರರಂತೆ ಯಕ್ಷ – ಯಕ್ಷಿಯರಿಗೂ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.