ಬೆಂಗಳೂರು: ‘ಸರ್ವಜ್ಞ ಹಾಗೂ ಪರಮಾರ್ಥ’ ಇವರೆಡೂ ಸರ್ವಜ್ಞನ ವಚನಗಳ ಅಂಕಿತ ಎಂಬ ವಾದ ಇದೆ. ಆದರೆ, ಪರಮಾರ್ಥವೆಂಬ ಅಂಕಿತವೇ ಸೂಕ್ತ ಎಂದು ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಪ್ರತಿಪಾದಿಸಿದರು.
‘ಕವಿ ಸರ್ವಜ್ಞ’ ಜಯಂತಿ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲ್ಲಿ ಗುರುವಾರ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
‘ಸರ್ವಜ್ಞಮೂರ್ತಿ ಎಂಬ ಹೆಸರಿನ ಕವಿಯ ವಚನಗಳ ಅಂಕಿತವನ್ನು ‘ಸರ್ವಜ್ಞ’ವೆಂದೇ ಗುರುತಿಸಲಾಗುತ್ತಿದೆ. ಆದರೆ, ಪರಮಾರ್ಥವೆಂಬುದು ಹೆಚ್ಚು ಸೂಕ್ತವೆಂಬುದನ್ನು ಆತನ ವಚನಗಳೇ ಸಾರುತ್ತವೆ’ ಎಂದು ಅಭಿಪ್ರಾಯಪಟ್ಟರು.
‘ಜನಪದ ಸಾಹಿತ್ಯವು ಸಾರ್ವಜನಿಕ ಆಸ್ತಿಯಾಗಿತ್ತು. ಸರ್ವಜ್ಞನ ಕಾಲದಲ್ಲಿ ಸಾಹಿತ್ಯ ಅರೆ ಖಾಸಗಿ ಸ್ವತ್ತಾಗಿತ್ತು. ಹಾಗಾಗಿ ಆತನ ನಂತರವೂ ಸರ್ವಜ್ಞ ಹೆಸರಿನಲ್ಲಿ ಹಲವರು ವಚನಗಳನ್ನು ರಚಿಸಿದ್ದಾರೆ. ಈಗ ಸರ್ವಜ್ಞನ ಮೂಲ ವಚನಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯಬೇಕಿದೆ’ ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ, ‘ಸರ್ವಜ್ಞನ ಜನಪ್ರಿಯ ಮಾದರಿಯನ್ನು ಅನುಸರಿಸಿ ಕೆಲವರು ಅವನ ಖಾತೆಗೆ ಹಲವು ವಚನಗಳನ್ನು ಜಮಾ ಮಾಡಿದ್ದಾರೆ. ಅವುಗಳನ್ನು ಅಗತ್ಯವಾಗಿ ಬೇರ್ಪಡಿಸಬೇಕಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.