ADVERTISEMENT

ಕಲ್ಯಾಣ ಕರ್ನಾಟಕ ಅಭಿವೃದ್ಧಿ: ₹ 363 ಕೋಟಿ ವೆಚ್ಚದ ಕ್ರಿಯಾಯೋಜನೆಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 12:38 IST
Last Updated 27 ಸೆಪ್ಟೆಂಬರ್ 2019, 12:38 IST
   

ಬೆಂಗಳೂರು: ಗುಲ್ಬರ್ಗಾ ಜಿಲ್ಲೆ ವ್ಯಾಪ್ತಿಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಮೈಕ್ರೋ ಯೋಜನೆಯಡಿ 254 ಕೋಟಿ ರೂ. ಹಾಗು ಮ್ಯಾಕ್ರೋ ಯೋಜನೆಯಡಿ 109 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಗುಲ್ಬಾರ್ಗ ಜಿಲ್ಲಾ ಸಲಹಾ ಸಮಿತಿಯು (ಕೆಕೆಆರ್‍ಡಿಬಿ) ಅನುಮೋದನೆ ನೀಡಿತು.

ವಿಕಾಸಸೌಧದಲ್ಲಿಂದು ಗುಲ್ಬರ್ಗಾ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ. ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯು ಮೈಕ್ರೋ ಯೋಜನೆಯಡಿ ಸಾಮಾಜಿಕ ವಲಯಕ್ಕೆ 100 ಕೋಟಿ ರೂ. ಮತ್ತು ಸಾಮಾಜಿಕೇತರ ವಲಯಕ್ಕೆ 151 ಕೋಟಿ ಹಾಗು ಮ್ಯಾಕ್ರೋ ಯೋಜನೆಯಡಿ ಸಾಮಾಜಿಕ ವಲಯಕ್ಕೆ 54 ಕೋಟಿ ಮತ್ತು ಸಾಮಾಜಿಕೇತರ ವಲಯಕ್ಕೆ 54 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.

ಡಾ. ನಂಜುಂಡಪ್ಪ ವರದಿಯ ಆಧಾರದಡಿ ಈ ಪ್ರದೇಶದ ಅಭಿವೃದ್ಧಿಗಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಮಂಡಳಿಯ ವ್ಯಾಪ್ತಿಯಲ್ಲಿ ಒಟ್ಟು 41 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತಿವೆ. 1500 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ನಿಯಮಾನುಸಾರ ಈ ಯೋಜನೆಯಡಿ ಬೃಹತ್ ಯೋಜನೆಗಳಾಗಿದ್ದರೂ 3 ವರ್ಷಗಳೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ವಿಳಂಬ ಮಾಡದೇ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಹೊಸತಾಲೂಕುಗಳಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು.

ADVERTISEMENT

ಮಂಡಳಿಗೆ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿ ತಾಂತ್ರಿಕವಾಗಿ ಸದೃಡಗೊಳಿಸಲಾಗುವುದು. ಕಾಮಗಾರಿಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲಾಗುವುದು. ಈ ಪ್ರದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಶ್ರೀ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಶ್ರೀ ದತ್ತಾತ್ರೇಯ ಪಾಟೀಲ ರೇವೂರ್, ಶ್ರೀ ಬಸವರಾಜ್ ಮತ್ತಿಮುಡ, ಶ್ರೀ ರಾಜಕುಮಾರ್ ಪಾಟೀಲ್ ಟೆಲ್ಕೂರ್, ಶ್ರೀ ಸುಭಾಷ್ ಆರ್ ಗುತ್ತೇದಾರ್, ಡಾ. ಅವಿನಾಶ್ ಜಾದವ್, ಶ್ರೀ ಪ್ರಿಯಾಂಕ ಖರ್ಗೆ, ಡಾ. ಅಜೇಯಸಿಂಗ್ , ಶ್ರೀ ಎಂ.ವೈ. ಪಾಟೀಲ್, ಶ್ರೀ ತಿಪ್ಪಣ್ಣ ಕಮ್ಮತನೂರ್, ಶ್ರೀಮತಿ ಕನಿಜ್ಹ ಫಾತೀಮ, ಡಿಸಿಎಂ ಅವರ ಆಪ್ತಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ, ಜಿಲ್ಲಾಧಿಕಾರಿ ಶ್ರೀ ಡಿ.ಶರತ್, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಪಿ.ರಾಜ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.