ADVERTISEMENT

10 ರಿಂದ ಅನ್ನಭಾಗ್ಯ ಯೋಜನೆ ಆರಂಭ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 19:59 IST
Last Updated 5 ಜುಲೈ 2013, 19:59 IST

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಡು ಬಡ ಕುಟುಂಬಗಳಿಗೆ ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ವಿತರಿಸುವ `ಅನ್ನಭಾಗ್ಯ' ಯೋಜನೆಗೆ ಜುಲೈ 10ರಿಂದ ಚಾಲನೆ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ವಿತರಿಸುವ ಅಕ್ಕಿ ಕಾಳಸಂತೆ ಸೇರದಂತೆ ತಡೆಯಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮುಂದಾಗಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, `ಪಡಿತರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರುವುದನ್ನು ತಪ್ಪಿಸುವುದಕ್ಕಾಗಿ ಎಲ್ಲ ಪಡಿತರ ಚೀಟಿಗಳನ್ನು ಆಧಾರ್ ಸಂಖ್ಯೆಯ ಜೊತೆ ಜೋಡಿಸಲು ನಿರ್ಧರಿಸಲಾಗಿದೆ' ಎಂದು ತಿಳಿಸಿದರು. ಆದರೆ, ಈ ಪ್ರಕ್ರಿಯೆ ಅನುಷ್ಠಾನಕ್ಕೆ ಕಾಲಮಿತಿ ನಿಗದಿಪಡಿಸಿರುವ ಕುರಿತು ಯಾವುದೇ ಮಾಹಿತಿ ನೀಡಲಿಲ್ಲ.

`ರಾಜ್ಯದಲ್ಲಿ ಒಟ್ಟು 1.33 ಕೋಟಿ ಪಡಿತರ ಚೀಟಿಗಳಿವೆ. ಈ ಪೈಕಿ 86.89 ಲಕ್ಷ `ಬಿಪಿಎಲ್' ಪಡಿತರ ಚೀಟಿಗಳು, 34.26 ಲಕ್ಷ ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳ ಪಡಿತರ ಚೀಟಿಗಳು ಮತ್ತು 11.16 ಲಕ್ಷ  ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗಳಿವೆ. ಆಧಾರ್ ಸಂಖ್ಯೆ ಜೊತೆ ಪಡಿತರ ಚೀಟಿಗಳನ್ನು ಜೋಡಿಸುವುದರಿಂದ ಅಕ್ರಮ ಪಡಿತರ ಚೀಟಿಗಳನ್ನು ತೆಗೆದುಹಾಕಲು ಅನುಕೂಲ ಆಗುತ್ತದೆ' ಎಂದು ಸಚಿವರು ಹೇಳಿದರು.

ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಹಂತ ಹಂತವಾಗಿ ಈ ಪ್ರಕ್ರಿಯೆ ಜಾರಿಯಾಗಲಿದೆ. ಮೊದಲ ಹಂತದಲ್ಲಿ ಮೈಸೂರು, ತುಮಕೂರು, ಧಾರವಾಡ, ಬೆಳಗಾವಿ ಜಿಲ್ಲೆಗಳು ಮತ್ತು ಬೆಂಗಳೂರಿನ ಒಂದು ವಲಯದಲ್ಲಿ ಮೊದಲ ಹಂತದಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರ ಅಳವಡಿಸಲಾಗುವುದು ಎಂದರು.

`ಇ-ಪಡಿತರ': ಬಯೊ ಮೆಟ್ರಿಕ್ ವ್ಯವಸ್ಥೆ ಇರುವ ಈ ಯಂತ್ರಗಳನ್ನು ಉಗ್ರಾಣಗಳಲ್ಲೂ ಅಳವಡಿಸಲಾಗುವುದು. ಇದರಿಂದ ಪಡಿತರ ದುರ್ಬಳಕೆ ಸಾಧ್ಯ ಆಗಲಿದೆ. ಈ ಯೋಜನೆಗೆ `ಇ-ಪಡಿತರ' ಎಂದು ಹೆಸರಿಸಲಾಗುವುದು ಎಂದು ವಿವರಿಸಿದರು.

ಪ್ರತಿ ಕೆ.ಜಿ. ಅಕ್ಕಿಯನ್ನು ರೂ 26  ರಿಯಾಯಿತಿ ದರದಲ್ಲಿ ಸರ್ಕಾರ ಪೂರೈಸುತ್ತಿದೆ. ಈ ಯೋಜನೆಗೆ ವಾರ್ಷಿಕ ರೂ 4,300 ಕೋಟಿ  ವೆಚ್ಚ ಮಾಡಲಾಗುತ್ತಿದೆ. ಪಡಿತರ ಸಾಗಣೆ ಮತ್ತು ವಿತರಣೆ ಮೇಲೆ ನಿಗಾ ಇರಿಸಲು ರಾಜ್ಯ ಮಟ್ಟದಿಂದ ತಾಲ್ಲೂಕು ಮಟ್ಟದವರೆಗೂ ಜಾಗೃತ ಸಮಿತಿಗಳನ್ನು ರಚಿಸಲಾಗುವುದು. ಅಕ್ಕಿ ತರುವುದು ಕಷ್ಟವಲ್ಲ. ಅಗತ್ಯ ಇರುವವರಿಗೆ ಸಮರ್ಪಕವಾಗಿ ವಿತರಿಸುವುದೇ ಸರ್ಕಾರ ಮುಂದಿರುವ ದೊಡ್ಡ ಸವಾಲು ಎಂದು ಸಚಿವರು ಹೇಳಿದರು.

12 ಲಕ್ಷ ಅರ್ಜಿ: ಹೊಸ ಪಡಿತರ ಚೀಟಿ ನೀಡುವಂತೆ ಕೋರಿ 12 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 9 ಲಕ್ಷ ಜನರು ಬಿಪಿಎಲ್ ಪಡಿತರ ಚೀಟಿ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮಗಳಿಗೆ ತೆರಳಿ ಪರಿಶೀಲಿಸಿದ ಬಳಿಕವೇ ಪಡಿತರ ಚೀಟಿ ನೀಡಲಾಗುವುದು. ಈಗ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಪೂರ್ಣಗೊಳ್ಳುವವರೆಗೂ ಹೊಸ ಅರ್ಜಿ ಸ್ವೀಕರಿಸುವುದನ್ನು ಸ್ಥಗಿತಗೊಳಿಸುವ ಬಗ್ಗೆ ಇಲಾಖೆ ಯೋಚಿಸಿದೆ ಎಂದರು.

ಅಕ್ಕಿ ಗಿರಣಿಗಳಿಂದ ಕಡ್ಡಾಯವಾಗಿ ಲೆವಿ ಅಕ್ಕಿ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ. ಲೆವಿ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಶೇಕಡ 33.33ರ ಪ್ರಮಾಣ ನಿಗದಿ ಮಾಡಿದೆ. ಆದರೆ, ಈ ಪ್ರಮಾಣದಲ್ಲಿ ಸಂಗ್ರಹಿಸುವುದು ಅಸಾಧ್ಯ. ಈ ಕಾರಣದಿಂದ ಲೆವಿ ಸಂಗ್ರಹ ಮಾನದಂಡವನ್ನು ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯ್ದೆ ಜಾರಿಗೆ ಬಂದ ಬಳಿಕ ರಾಜ್ಯಕ್ಕೆ ಹೆಚ್ಚಿನ ಪ್ರಯೋಜನ ಆಗುತ್ತದೆ. ಸದ್ಯ ಕೇಂದ್ರ ಸರ್ಕಾರವು ರಾಜ್ಯಕ್ಕೆ 32 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಮಾತ್ರ ರಿಯಾಯಿತಿ ದರದಲ್ಲಿ ಪಡಿತರ ಒದಗಿಸುತ್ತಿದೆ. ಆಹಾರ ಭದ್ರತಾ ಕಾಯ್ದೆ ಜಾರಿಯಾದ ಬಳಿಕ ಈ ಪ್ರಮಾಣ ದ್ವಿಗುಣವಾಗಲಿದೆ ಎಂದರು.

ಮಾರುಕಟ್ಟೆ ಏರಿಳಿತದ ಹೆದರಿಕೆ
ರಾಗಿ ಮತ್ತು ಜೋಳವನ್ನು ಪಡಿತರ ವಿತರಣಾ ವ್ಯವಸ್ಥೆಯಡಿ ಪೂರೈಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ, ಈ ಧಾನ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದರೆ ಮಾರುಕಟ್ಟೆಯಲ್ಲಿ ಏರಿಳಿತ ಉಂಟಾಗಬಹುದು ಎಂಬ ಆತಂಕವಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

`ಪ್ರದೇಶದಿಂದ ಪ್ರದೇಶಕ್ಕೆ ಆಹಾರ ಪದ್ಧತಿಯಲ್ಲಿ ವ್ಯತ್ಯಾಸ ಇದೆ ಎಂಬುದು ನಮಗೆ ಗೊತ್ತು. ಜನ ಬಯಸುವ ಪದಾರ್ಥವನ್ನೇ ಪೂರೈಸಬೇಕು ಎಂಬ ಆಶಯವನ್ನು ಸರ್ಕಾರ ಹೊಂದಿದೆ. ಆದರೆ, ಸರ್ಕಾರದ ಪ್ರವೇಶದಿಂದ ಮಾರುಕಟ್ಟೆಯಲ್ಲಿ ಅಲ್ಲೋಲ್ಲಕಲ್ಲೋಲ್ಲ ಆಗಬಹುದು ಎಂಬ ಭಯವಿದೆ' ಎಂದರು.  ಗೋಧಿ ವಿತರಣೆ ಸ್ಥಗಿತ ಕುರಿತು ಪ್ರತಿಕ್ರಿಯಿಸಿದ ಅವರು, `ಗೋಧಿಗೆ ಬೇಡಿಕೆ ಬಂದರೆ ಪ್ರತಿ ಕೆ.ಜಿ.ಗೆ ಒಂದು ರೂಪಾಯಿ ದರದಲ್ಲೇ ವಿತರಿಸಲು ಸಿದ್ಧ. ಆದರೆ, ಈ ತಿಂಗಳಿನಿಂದ ಗೋಧಿ ಪೂರೈಸುತ್ತಿಲ್ಲ' ಎಂದರು.

ಇತರೆ ನಿರ್ಣಯಗಳು...
ಬಿಪಿಎಲ್ ಕುಟುಂಬಗಳಿಗೆ ಹೆಚ್ಚುವರಿಯಾಗಿ 1 ಲೀಟರ್  ಸೀಮೆಎಣ್ಣೆ

ಪ್ರತಿ ಲೀಟರ್ ಸೀಮೆಎಣ್ಣೆ ದರದಲ್ಲಿ 50 ಪೈಸೆ ಇಳಿಕೆ.

ಬೆಂಗಳೂರು ನಗರವನ್ನು ಸೀಮೆಎಣ್ಣೆ ಬಳಕೆಯಿಂದ ಮುಕ್ತಗೊಳಿಸಲು ಎಲ್ಲಾ ಕುಟುಂಬಗಳಿಗೂ ಎಲ್‌ಪಿಜಿ ಸಂಪರ್ಕ ಒದಗಿಸುವುದು.

27 ಹೊಸ ಉಗ್ರಾಣಗಳನಿರ್ಮಾಣ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.