ADVERTISEMENT

118 ಅಡಿ ಉದ್ದದ ಚೂಡಿದಾರ್!

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ಮೈಸೂರು: ಒಂದು ಚೂಡಿದಾರ್ ಹೊಲಿಯಲು ಎಷ್ಟು ಬಟ್ಟೆ ಬೇಕಾಗಬಹುದು? ಹಾಗೆಯೇ ಎಷ್ಟು ಸಮಯ ಬೇಕಾಗಬಹುದು? ಟಾಪ್‌ಗೆ ಎರಡೂವರೆ ಮೀಟರ್ ಹಾಗೂ ಪ್ಯಾಂಟ್‌ಗೆ ಎರಡು ಮೀಟರ್ ಎಂದು ನೀವು ಹೇಳಬಹುದು.

ಆದರೆ, ಇಲ್ಲೊಬ್ಬರು ಬರೋಬ್ಬರಿ 570 ಮೀಟರ್ ಬಟ್ಟೆ ಉಪಯೋಗಿಸಿ 7 ಗಂಟೆಗಳ ಕಾಲ ನಿರಂತರವಾಗಿ ಚೂಡಿದಾರ್ ಹೊಲಿಯುವ ಮೂಲಕ ಗುರುವಾರ ದಾಖಲೆ ನಿರ್ಮಿಸಿದರು. ಇದನ್ನು ಅವರು ಗಿನ್ನಿಸ್ ದಾಖಲೆಗೆ ಪರಿಗಣಿಸಲು ಕೋರಿದ್ದಾರೆ.

ಕುವೆಂಪು ನಗರದ ಟೈಲರ್ ಪ್ರಕಾಶ್‌ರಾವ್ ಜಾಧವ್ ಅವರೇ ಈ ದಾಖಲೆ ನಿರ್ಮಿಸಿದವರು. 69.8 ಅಡಿ ಉದ್ದದ ಟಾಪ್ ಹಾಗೂ 49 ಅಡಿ ಉದ್ದದ ಪ್ಯಾಂಟ್ ಹೊಲಿಯುವ ಮೂಲಕ ಜಗತ್ತಿನ ಅತಿ ದೊಡ್ಡ ಚೂಡಿದಾರವನ್ನು ಹೊಲಿದ ಖ್ಯಾತಿಯನ್ನು ತಮ್ಮದಾಗಿಸಿಕೊಂಡರು.

ADVERTISEMENT

ಬೆಳಿಗ್ಗೆ 11 ಗಂಟೆಗೆ ಸ್ನೇಹಿತರಾದ ರವಿ ಹಾಗೂ ರೂಪೇಶ್ ಅವರೊಂದಿಗೆ ಜಗತ್ತಿನ ಅತಿ ದೊಡ್ಡ ಚೂಡಿದಾರ್ ಹೊಲಿಯಲು ಮುಂದಾದರು. ಟಾಪ್‌ಗೆ 285 ಮೀಟರ್ ಹಾಗೂ ಪ್ಯಾಂಟ್‌ಗೆ 285 ಮೀಟರ್ ಸೇರಿದಂತೆ ಒಟ್ಟು 570 ಮೀಟರ್ ಬಟ್ಟೆ ಮತ್ತು 4800 ಮೀಟರ್ ದಾರ ಬಳಸಿಕೊಂಡು, ಸಂಜೆ 6.15 ಗಂಟೆಗೆ ಮುಗಿಸುವ ಮೂಲಕ ಈ ದಾಖಲೆ ನಿರ್ಮಿಸಿದರು.

2010ರ ಫೆಬ್ರುವರಿ 16ರಂದು ಸೌದಿ ಅರೇಬಿಯಾದ ಟೈಲರ್ ಲೋಮಾರ್ ಅವರು ಒಟ್ಟು 111.2 ಅಡಿ ಉದ್ದದ ಚೂಡಿದಾರ್ ಹೊಲಿಯುವ ಮೂಲಕ ದಾಖಲೆ ನಿರ್ಮಿಸಿದ್ದರು. ಪ್ರಕಾಶ್‌ರಾವ್ ಅವರು 118.80 ಅಡಿ ಚೂಡಿದಾರ್ ಹೊಲಿಯುವ ಮೂಲಕ ಆ ದಾಖಲೆಯನ್ನು ಅಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.