ಬೆಂಗಳೂರು: ‘ರಾಜ್ಯದ 12 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಭೂಸಾರಿಗೆ ಇಲಾಖೆ ಮಂಜೂರಾತಿ ನೀಡಿದೆ. ದೇಶದಲ್ಲಿ ಅತೀ ಹೆಚ್ಚು ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ’ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇನ್ನೂ ಎರಡು ರಾಜ್ಯ ಹೆದ್ದಾರಿಗಳೂ ಶೀಘ್ರವೇ ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಲಿವೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಹಾಗೂ ನಿರ್ವಹಣೆಯ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ’ ಎಂದರು.
‘ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 3.5 ಸಾವಿರ ಕಿಲೋ ಮೀಟರ್‌ಗಳಷ್ಟು ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಘೋಷಿಸಲಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲೂ 2 ಸಾವಿರ ಕಿಲೋ ಮೀಟರ್ ಉದ್ದದ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಘೋಷಿಸಲಾಗಿತ್ತು’ ಎಂದು ಅವರು ವಿವರಿಸಿದರು.
ಹುಬ್ಬಳ್ಳಿ–ವಿಜಯಪುರ ಹೆದ್ದಾರಿಯನ್ನು 10 ಮೀ. ಹೆದ್ದಾರಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಮೈಸೂರು– ಬೆಂಗಳೂರು ಹೆದ್ದಾರಿಯನ್ನು ಷಟ್ಪಥವನ್ನಾಗಿ (ಆರು ಲೇನ್) ಅಭಿವೃದ್ಧಿಪಡಿಸಲು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಒಪ್ಪಿಗೆ ನೀಡಿದ್ದಾರೆ. ಈ ಹೆದ್ದಾರಿ ಇಕ್ಕೆಲದಲ್ಲಿ ಸರ್ವೀಸ್ ರಸ್ತೆಗಳೂ ಬರಲಿವೆ. ಈ ಯೋಜನೆಗೆ ₹2,300 ಕೋಟಿ ವೆಚ್ಚವಾಗಲಿದೆ. ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ’ ಎಂದು ಹೇಳಿದರು.
‘ಈ ಕಾಮಗಾರಿಗೆ ಒಟ್ಟು 1,350 ಎಕರೆ ಭೂಸ್ವಾಧೀನ ನಡೆಸಬೇಕಾಗುತ್ತದೆ. ಮೂರು ತಿಂಗಳ ಒಳಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿಸುವಂತೆ ಗಡ್ಕರಿ ಅವರು ಸೂಚಿಸಿದ್ದಾರೆ. ಇದಕ್ಕಾಗಿ ವಿಶೇಷ ಭೂಸ್ವಾಧೀನ ಅಧಿಕಾರಿಗಳನ್ನು ನೇಮಿಸಲಾಗುವುದು. ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತಪ್ಪಿಸುವಂತೆ, ಅಗತ್ಯ ಇರುವ ಕಡೆ ಬೈಪಾಸ್ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಫೆಬ್ರುವರಿಯಲ್ಲಿ ಗಡ್ಕರಿ ಅವರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ’ ಎಂದು ಅವರು ಹೇಳಿದರು.
‘ಅಪಘಾತಗಳನ್ನು ತಪ್ಪಿಸುವ ಸಲುವಾಗಿ ನೆಲಮಂಗಲ–ತುಮಕೂರು ಹೆದ್ದಾರಿಯನ್ನು ಎಂಟು ಪಥಗಳನ್ನಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದೆ. ಕೇಂದ್ರ ಸರ್ಕಾರವೂ ಇದಕ್ಕೆ ಒಪ್ಪಿದೆ’ ಎಂದರು.
***
ಟೋಲ್ ಸಂಗ್ರಹಿಸುವ ಹೆದ್ದಾರಿಗಳು ‘ಅಪಘಾತರಹಿತ’ವಾಗಿರಬೇಕು. ಹೆದ್ದಾರಿಗಳಲ್ಲಿ ವಿಭಜಕಗಳನ್ನು ಒಡೆದು ರೆಸ್ಟೋರೆಂಟ್‌ಗಳಿಗೆ ಸಂಪರ್ಕ ಕಲ್ಪಿಸಿದ್ದರೆ, ಅವುಗಳನ್ನು ತೆಗೆಸಲಾಗುವುದು.
-ಡಾ.ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.