ADVERTISEMENT

1.25 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ!

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಆಡಳಿತಕ್ಕೆ ಕಾಯಕಲ್ಪ ನೀಡಲು ಮುಂದಾಗಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಖಾಲಿ ಹುದ್ದೆಗಳ ಕೊರತೆಯೇ ದೊಡ್ಡ ಸವಾಲಾಗಿದೆ.
ರಾಜ್ಯದಲ್ಲಿ ಒಟ್ಟು 1,25,359 ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದ­ರಲ್ಲಿ 10,722 ಅಧಿಕಾರಿ ಮತ್ತು 1,14,­637 ಇತರ ಸಿಬ್ಬಂದಿ ಸ್ಥಾನ­ಗಳೂ ಸೇರಿವೆ ಎಂಬುದನ್ನು ಹಣಕಾಸು ಇಲಾಖೆ ವರದಿ ಹೇಳುತ್ತದೆ.

2009ರ ಅಕ್ಟೋಬರ್ 21ರಂದು ಜಾರಿಯಾದ ‘ಆರ್ಥಿಕ ಮಿತವ್ಯಯ’­ವನ್ನು ಸರ್ಕಾರ ಇನ್ನೂ ಸಂಪೂರ್ಣವಾಗಿ ತೆಗೆದುಹಾಕಿಲ್ಲ. ಇದರಿಂದ ನೇಮಕಾತಿ ಪ್ರಕ್ರಿಯೆ ಸಕಾಲಕ್ಕೆ ನಡೆಯುತ್ತಿಲ್ಲ. 2009ರಲ್ಲಿ ರಾಜ್ಯದ ವಿವಿಧ ಪ್ರದೇಶಗಳು ಅತಿವೃಷ್ಟಿಗೆ ಒಳಗಾಗಿ ಅಪಾರ ಹಾನಿ ಉಂಟಾಗಿತ್ತು.

ಈ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಅಗತ್ಯ ಸಂಪನ್ಮೂಲಗಳನ್ನು ಸಂಗ್ರಹಿಸುವ ಉದ್ದೇಶದಿಂದ ಮಿತ­ವ್ಯಯ ಜಾರಿಗೆ ತರಲಾಯಿತು. ಪ್ರಮುಖ­­ವಾಗಿ ಯೋಜನೇತರ ವೆಚ್ಚ ನಿಯಂತ್ರಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಉಪಯೋಗಿಸಲು ಈ ಆದೇಶ ಹೊರಡಿಸಲಾಗಿತ್ತು. ಇದರಿಂದ ಹೊಸ ನೇಮಕಾತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿ­ಸ­ಲಾಯಿತು. ಆದರೆ ನಿವೃತ್ತರನ್ನು ಸೇವೆಯಲ್ಲಿ ಮುಂದುವರಿಸುವುದು ನಿಂತಿಲ್ಲ.

ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯಲ್ಲೇ ಅತಿ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ. ಶಿಕ್ಷಣ ಇಲಾಖೆ­ಯೊಂದರಲ್ಲೇ 3,454 ಅಧಿಕಾರಿಗಳು ಸೇರಿದಂತೆ 24,804 ಹುದ್ದೆಗಳು ಖಾಲಿ ಇವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 19,175 ಹುದ್ದೆಗಳು ಖಾಲಿ ಉಳಿದಿವೆ.

ಪೊಲೀಸ್ ಇಲಾಖೆಯಲ್ಲೂ 22,­644 ಹುದ್ದೆಗಳು ಭರ್ತಿಯಾಗಿಲ್ಲ. ಒಟ್ಟು 75,795 ಅಧಿಕಾರಿಗಳು ಮತ್ತು ಸಿಬ್ಬಂದಿ­ಯನ್ನು ಪೊಲೀಸ್ ಇಲಾಖೆ ಹೊಂದಿದೆ. ರಾಜ್ಯದ ಜನಸಂಖ್ಯೆಗೆ ಹೋಲಿಸಿ­ದಾಗ 645 ಜನರಿಗೆ ಒಬ್ಬ ಪೊಲೀಸ್ ಸಿಬ್ಬಂದಿ ಇದ್ದಾರೆ ಎನ್ನು­ವುದು ಸರ್ಕಾರದ ಹಣಕಾಸು ಇಲಾಖೆ ಅಂಕಿ ಸಂಖ್ಯೆಗಳ ವಿವರಣೆ.

ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯಲ್ಲಿನ ಕೆಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆರ್ಥಿಕ ಮಿತವ್ಯಯ ಸಡಿಲಿಸುವುದಾಗಿ ಸರ್ಕಾರ ತಿಳಿಸಿದೆ. ಆದರೆ, ಇದು ಸಹ ನಿಧಾನ­ಗತಿಯಲ್ಲಿ ಸಾಗುತ್ತಿದೆ ಎಂದು ಅಧಿಕಾರಿ­ಗಳು ಹೇಳುತ್ತಾರೆ. ಹೊಸದಾಗಿ  ಪೇದೆ­ಗಳು ಮತ್ತು ಇನ್‌ಸ್ಪೆಕ್ಟರ್‌ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾ­ದರೂ ನೇಮಕಾತಿ ಪ್ರಕ್ರಿಯೆ ಹಾಗೂ ತರಬೇತಿ ಮುಗಿದು ಕರ್ತವ್ಯಕ್ಕೆ ಹಾಜರಾಗಲು ಒಂದೂವರೆಯಿಂದ ಎರಡು ವರ್ಷ ಬೇಕಾ­ಗುತ್ತದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಾರೆ.

ಹೆಚ್ಚಿದ ಒತ್ತಡ:  ಮಾಹಿತಿ ಹಕ್ಕು ಕಾಯ್ದೆ ಮತ್ತು ‘ಸಕಾಲ’ ಜಾರಿಯಾದ ನಂತರ ಸರ್ಕಾರಿ ಇಲಾಖೆಗಳಲ್ಲಿ ಕೆಲಸದ ಒತ್ತಡ ಹೆಚ್ಚಿದೆ. ಜತೆಗೆ ಮೊದಲಿ­ಗಿಂತಲೂ ಈಗ ಯೋಜನೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡುತ್ತಿ-­ರು-­ವು­­ದರಿಂದ ಸಹಜ­ವಾಗಿ ಕಾರ್ಯಭಾರ ದ್ವಿಗುಣ­ಗೊಂಡಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ನೀಡ­ದಿದ್ದರೆ ಅರ್ಜಿದಾರರು ಮಾಹಿತಿ ಆಯೋಗಕ್ಕೆ ದೂರು ನೀಡು­ತ್ತಾರೆ. ಅದೇ ರೀತಿ ಸಕಾಲದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಇದರಿಂದಾಗಿ ಹೆಚ್ಚಿನ ಸಿಬ್ಬಂದಿ ಬೇಕು ಎನ್ನುವುದು ಅಧಿಕಾರಿಗಳ ಪ್ರತಿಪಾದನೆ.

‘ಜನಸಂಖ್ಯೆಗೆ ತಕ್ಕಂತೆ ನೌಕರರಿಲ್ಲ’
ರಾಜ್ಯದ ಜನಸಂಖ್ಯೆ 6 ಕೋಟಿ ದಾಟಿದೆ. ಸರ್ಕಾರವೂ ಹೊಸ, ಹೊಸ ಕಾರ್ಯ­ಕ್ರಮ­ಗಳನ್ನು ರೂಪಿಸುತ್ತಿರು­ವುದರಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡು­ವುದು ಅಗತ್ಯವಾಗಿದೆ. ಯಾವುದೇ ಇಲಾಖೆಯಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ಇಲ್ಲ. ಸರ್ಕಾರಕ್ಕೆ ವರಮಾನ ತರುವ ವಾಣಿಜ್ಯ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ.

ಸದ್ಯಕ್ಕೆ ಪ್ರತಿ ವರ್ಷ ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಎಲ್ಲ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ₨ 20 ಸಾವಿರ ಕೋಟಿ  ವೆಚ್ಚ­ವಾಗುತ್ತದೆ. ಇದು ಬಜೆಟ್‌ನ ಶೇಕಡಾ 20ರಷ್ಟು ಭಾಗ ಮಾತ್ರ. ನಿವೃತ್ತರಿಗೆ ವಿಸ್ತರಣೆ ನೀಡುವುದು ಅತಿ ಕಡಿಮೆ. ಅದು ಸಹ ಕೆಲವೇ ಅಧಿಕಾರಿಗಳಿಗೆ ನೀಡಲಾಗುತ್ತಿದೆ. ಇದು ಶೇಕಡಾ 1ರಷ್ಟು ಸಹ ಅಲ್ಲ.

ADVERTISEMENT

ಹಿಂದಿನ ಬಿಜೆಪಿ ಸರ್ಕಾರ ಸುಮಾರು 42 ಸಾವಿರ ದಿನಗೂಲಿ ನೌಕರರನ್ನು ಕಾಯಂಗೊಳಿಸಿದ್ದು, ನೇಮಕ ಪ್ರಕ್ರಿಯೆ­ಗಳು ನಡೆಯುತ್ತಿದೆ. ಈ 42 ಸಾವಿರ ನೌಕರರು ಬಹುತೇಕ ನಿವೃತ್ತಿ ಅಂಚಿ­ನಲ್ಲಿದ್ದಾರೆ. ಇದರಿಂದ ಮತ್ತೆ ಹುದ್ದೆಗಳು ಖಾಲಿ ಉಳಿಯಲಿವೆ.
-–ಎಲ್. ಭೈರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ.

‘ಅನಗತ್ಯ ವೆಚ್ಚ ಕೈಬಿಟ್ಟು ನೇಮಕಕ್ಕೆ ಆದ್ಯತೆ ನೀಡಲಿ’
ಸರ್ಕಾರ ಬಜೆಟ್ ಮಂಡಿಸುವಾಗ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಪ್ರಕಟಿಸು­ತ್ತದೆ. ಆದರೆ, ವಾಸ್ತವದಲ್ಲಿ ನಡೆಯು­ವು­ದಿಲ್ಲ. ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡುವಂತೆ ವಿಶ್ವಬ್ಯಾಂಕ್ ಸೂಚಿಸಿದೆ. ಸರ್ಕಾರ ಇಂತಹ ಸೂಚನೆಗಳನ್ನು ಪಾಲಿಸುವುದಿಲ್ಲ. ಪ್ರಸ್ತುತ 1.50 ಲಕ್ಷ ಮಹಿಳಾ ನೌಕರರು ಸೇರಿದಂತೆ ಒಟ್ಟು 5.57 ಲಕ್ಷ ಸರ್ಕಾರಿ ನೌಕರರಿದ್ದಾರೆ. ಸಕಾಲಕ್ಕೆ ಹುದ್ದೆಗಳ ಭರ್ತಿ ಪ್ರಕ್ರಿಯೆಗಳು ನಡೆಯದ ಕಾರಣ ಮಧ್ಯಮ ಹಂತದಲ್ಲಿ ಬಹುತೇಕ ಹುದ್ದೆಗಳು ಖಾಲಿ ಉಳಿಯು­ತ್ತಿವೆ.

2016ರವರೆಗೆ ಪ್ರತಿ ವರ್ಷ 15 ರಿಂದ 20 ಸಾವಿರ ನೌಕರರು ನಿವೃತ್ತಿ­ಯಾಗು­ತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ‘ಸಿ’ ಗುಂಪಿನ ಹುದ್ದೆಗಳು ಖಾಲಿ ಉಳಿದಿವೆ. ಈಗಾಗಲೇ ‘ಡಿ’ ಗುಂಪಿನ ಹುದ್ದೆಗಳನ್ನು ಸಂಪೂರ್ಣ ರದ್ದು ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.  ಸರ್ಕಾರ ಈಗ ಹೊರಗುತ್ತಿಗೆ ನೀಡುತ್ತಿದೆ. ಇದು ಸರ್ಕಾರಿ ವ್ಯವಸ್ಥೆಗೆ ಸರಿ ಅಲ್ಲ.
-– ಯು.ಡಿ. ನರಸಿಂಹಯ್ಯ, ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ.

ಹೊರಗುತ್ತಿಗೆ ಎನ್ನುವ ಜೀತ ಪದ್ಧತಿ!
ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬದಲು ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಹೊರಗುತ್ತಿಗೆ ವಿಧಾನ ಅನುಸರಿಸುತ್ತಿದೆ. ಇದರಿಂದ ಆರ್ಥಿಕ ಭಾರ ಕಡಿಮೆ ಮಾಡಿಕೊಳ್ಳ­ಬಹುದು ಎನ್ನುವುದು ಸರ್ಕಾರದ ಲೆಕ್ಕಾಚಾರ. ಆದರೆ, ಇದು ಶೋಷಣೆಗೆ ದಾರಿಯಾಗಿದೆ. ಹೊರ­ಗುತ್ತಿಗೆ ಪಡೆಯು­ವಾಗ ಟೆಂಡರ್‌ನಲ್ಲಿ ನಮೂದಿಸುವ ವೇತನವನ್ನು ಯಾವುದೇ ಗುತ್ತಿಗೆದಾರ ಆತ ನೇಮಿಸಿಕೊಳ್ಳುವ ಸಿಬ್ಬಂದಿಗೆ ನೀಡುವು­ದಿಲ್ಲ ಎನ್ನುವುದು ಸಾಮಾನ್ಯ ಆರೋಪ.

ಹೊರಗುತ್ತಿಗೆ ಮೂಲಕ ನೇಮಕಾತಿ ಹೊಂದಿದ್ದ ಮೊರಾರ್ಜಿ ಶಾಲಾ ಶಿಕ್ಷಕರ ಬಗ್ಗೆ ಅಧ್ಯಯನ ಮಾಡಿದ್ದ ಹಿಂದುಳಿದ ವರ್ಗಗಳ ಆಯೋಗವು, ಮಾನವ ಸಂಪ­ನ್ಮೂಲಕ್ಕೆ ಟೆಂಡರ್ ಕರೆದು ಹೊರಗುತ್ತಿಗೆ ನೀಡುವುದು ಜೀತಪದ್ಧತಿ ಇನ್ನೊಂದು ಮುಖ ಎಂದು ಸರ್ಕಾರಕ್ಕೆ ವರದಿ ನೀಡಿತ್ತು. ಆದರೆ, ಪರಿಸ್ಥಿತಿ ಮಾತ್ರ ಬದಲಾಗಿಲ್ಲ.

ಹಲವು ಇಲಾಖೆಗಳಲ್ಲಿ ದಿನಗೂಲಿ ನೌಕರರ ಸೇವೆ ಪಡೆಯಲಾಗು­ತ್ತಿದೆ. ಆದರೆ, ಸುಪ್ರೀಂ ಕೋರ್ಟ್ 240 ದಿನ ಸೇವೆ ಪೂರೈಸಿದರೆ ಕಾಯಂ ಮಾಡಬೇಕು ಎಂದು ತೀರ್ಪು ನೀಡಿದೆ. ಈ ತೀರ್ಪು ನೌಕರರಿಗೆ ಅನ್ವಯಿಸದಂತೆ ಅಧಿಕಾರ ವರ್ಗ ಎಚ್ಚರ­ವಹಿಸುತ್ತಿದೆ. ಸತತ 240 ದಿನಗಳ ಕಾಲ ಕಾರ್ಯನಿರ್ವಹಿಸಲು ಅವಕಾಶವನ್ನೇ ನೀಡದೆ ದಿನಗೂಲಿ ನೌಕರರಿಗೆ ಮಧ್ಯದಲ್ಲಿ ಪದೇ ಪದೇ ರಜೆ ನೀಡುತ್ತಾರೆ. ಇದರಿಂದ  ತಮ್ಮ ಹಕ್ಕನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಈ ನೌಕರರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.