ADVERTISEMENT

₹ 13.55 ಲಕ್ಷ ವಂಚನೆ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST

ಸುಂಟಿಕೊಪ್ಪ (ಕೊಡಗು): ಎಟಿಎಂಗಳಲ್ಲಿ ಹಣ ತುಂಬಿಸುವ ನಾಲ್ವರು ಸಿಬ್ಬಂದಿ ಇಲ್ಲಿನ ಎರಡು ಬ್ಯಾಂಕುಗಳ ಎಟಿಎಂಗಳಲ್ಲಿನ ₹ 13.55 ಲಕ್ಷ ಹಣ ಲಪಟಾಯಿಸಿ ಭಾನುವಾರ ಸಿಕ್ಕಿಬಿದ್ದಿದ್ದಾರೆ.

ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ತೊಂಡೂರು ಗ್ರಾಮದ ಬಿ.ಈ.ಪ್ರಕಾಶ್ ಪೂಜಾರಿ, ಕೆ.ಎ.ಉಮೇಶ, ಬಿ.ಕೆ.ಅಬ್ದುಲ್ ಸಲಾಂ ಹಾಗೂ ಕುಶಾಲನಗರ ಸಮೀಪದ ಮದಲಪುರದ ಸೀಗೆಹೊಸೂರು ಗ್ರಾಮದ ವಿ.ಪಿ.ರವಿ ಬಂಧಿತ ಆರೋಪಿಗಳು.

ಘಟನೆಯ ವಿವರ:
ಮೈಸೂರು ಶಾಖೆಯ ರೈಟರ್ ಸೇಫ್ ಗಾರ್ಡ್‌ ಕಂಪನಿಯವರು ಏಳನೇ ಹೊಸಕೋಟೆಯ ಕಾರ್ಪೊರೇಷನ್ ಬ್ಯಾಂಕಿನ ಎಟಿಎಂಗೆ ಹಣ ತುಂಬಿಸಲು ಪ್ರಕಾಶ್ ಪೂಜಾರಿ, ಉಮೇಶ್ ಹಾಗೂ ಸುಂಟಿಕೊಪ್ಪ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಎಟಿಎಂಗೆ ಹಣ ತುಂಬಲು ಕೆ.ಎ. ಅಬ್ದುಲ್ ಸಲಾಂ ಹಾಗೂ ವಿ.ಪಿ.ರವಿ ಅವರನ್ನು ನೇಮಿಸಿದ್ದರು.

ADVERTISEMENT

ಮೈಸೂರು ಶಾಖೆಯ ವ್ಯವಸ್ಥಾಪಕ ಎಂ.ದಿಲೀಪಕುಮಾರ್ ಮತ್ತು ಸಿಬ್ಬಂದಿ ಮಲ್ಲೇಶ್ ಅವರು ಮಾರ್ಚ್‌ 30ರಂದು ಅನಿರೀಕ್ಷಿತವಾಗಿ ಈ ಎರಡೂ ಬ್ಯಾಂಕುಗಳಿಗೆ ಭೇಟಿ ನೀಡಿ, ಎಟಿಎಂ ಯಂತ್ರ ಪರಿಶೀಲಿಸಿದಾಗ ಹಣ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಕೂಡಲೇ ದಿಲೀಪಕುಮಾರ್ ಅವರು ಕಂಪನಿಯ ರಾಜ್ಯ ಮೇಲ್ವಿಚಾರಕ ಇಂದ್ರಕುಮಾರ ಅವರಿಗೆ ಮಾಹಿತಿ ನೀಡಿದರು. ಜತೆಗೆ, ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಸುಂಟಿಕೊಪ್ಪ ಠಾಣೆಯ ಪಿಎಸ್‌ಐ ಜಯರಾಮ್, ಆರೋಪಿಗಳನ್ನು ಏಳನೇ ಹೊಸಕೋಟೆಯ ತೊಂಡೂರು ಗ್ರಾಮದಲ್ಲಿ ಭಾನುವಾರ ಬಂಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.