ರಾಯಚೂರು: `ಅಬ್ಬಾ! ಆ ಗಜಗಾತ್ರದ ಎತ್ತುಗಳು. ಟನ್‌ಗಟ್ಟಲೆ ಭಾರವಾದ ಕಲ್ಲನ್ನು ಎಳೆಯುವಾಗ ಅವುಗಳು ತೋರಿದ ಸಾಮರ್ಥ್ಯ ಕಂಡು ರೋಮಾಂಚನವಾಯ್ತು'-ಇದು ಜರ್ಮನಿಯ ಪ್ರಜೆಗಳ ಉದ್ಗಾರ. ನಗರದಲ್ಲಿ ಮುನ್ನೂರು ಕಾಪು ಬಲಿಜ ಸಮಾಜದ ನೇತೃತ್ವದಲ್ಲಿ ಶನಿವಾರ ಆರಂಭಗೊಂಡ `ಮುಂಗಾರು ಸಾಂಸ್ಕೃತಿಕ ಹಬ್ಬ'ದ ಆಕರ್ಷಣೆಯಾದ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ವೀಕ್ಷಿಸಿದ ಅವರು ಖುಷಿಯಾಗಿದ್ದರು.
ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ)ಯ ಕಾರ್ಯಕರ್ತರಾದ ಜೂಲಿಯನ್, ಮ್ಯಾಕ್ಸನ್ ಹಾಗೂ ವಾಲಿಯಸ್ ಅವರು ನಮ್ಮ ದೇಸಿ ಕ್ರೀಡೆಗೆ ಮನಸೋತಿದ್ದರು.`ಬುಲ್ ಫೈಟ್, ವಿವಿಧ ಪ್ರಾಣಿಗಳ ಸ್ಪರ್ಧೆ, ಆಟಗಳನ್ನು ನೋಡಿದ್ದೇವೆ. ಭಾರತದಲ್ಲೂ ಈ ರೀತಿ ಮನರಂಜನಾ ಕ್ರೀಡೆಗಳಿವೆ ಎನ್ನುವುದು ಗೊತ್ತಿತ್ತು. ಆದರೆ ನೋಡಿರಲಿಲ್ಲ. ಈಗ ಅನಾಯಾಸವಾಗಿ ಅಂಥ ಅವಕಾಶ ಒದಗಿಬಂತು' ಎಂದು ಸಂಭ್ರಮಿಸಿದರು.
ಬುದ್ಧಿಮಾಂದ್ಯ ಹಾಗೂ ಅನಾಥ ಮಕ್ಕಳ ಕುರಿತಾದ ಅಧ್ಯಯನಕ್ಕಾಗಿ ಅವರು ಬಳ್ಳಾರಿಗೆ ಬಂದಿದ್ದರು. ಅನಿರೀಕ್ಷಿತವಾಗಿ ಬಂದ ವಿದೇಶಿ ಅತಿಥಿಗಳನ್ನು `ಮುಂಗಾರು ಸಾಂಸ್ಕೃತಿಕ ಹಬ್ಬ'ದ ಅಧ್ಯಕ್ಷ ಎ.ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಹಾಗೂ ಸಂಘಟಕರು ರೇಷ್ಮೆ ಶಾಲು ಹೊದಿಸಿ ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.