ADVERTISEMENT

ಖಜಾನೆಯಿಂದ ಹೊರಗುಳಿದ ₹ 17,000 ಕೋಟಿ: ಶ್ವೇತಪತ್ರ ಪ್ರಕಟಿಸಲು ಪಾಟೀಲ್‌ ಆಗ್ರಹ

ಶ್ವೇತಪತ್ರ ಪ್ರಕಟಿಸುವಂತೆ ಎಚ್‌.ಕೆ. ಪಾಟೀಲ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 19:31 IST
Last Updated 18 ಮಾರ್ಚ್ 2021, 19:31 IST
ಎಚ್‌.ಕೆ. ಪಾಟೀಲ
ಎಚ್‌.ಕೆ. ಪಾಟೀಲ   

ಬೆಂಗಳೂರು: ಅಧಿಕಾರಿಗಳ ವೈಯಕ್ತಿಕ ಠೇವಣಿ (ಪಿ.ಡಿ) ಖಾತೆಗಳು ಹಾಗೂ ವಿವಿಧ ಬ್ಯಾಂಕ್‌ಗಳಲ್ಲಿ ಇರಿಸಿರುವ ಪ್ರತ್ಯೇಕ ಠೇವಣಿಗಳು ಸೇರಿದಂತೆ ₹17,000 ಕೋಟಿ ಮೊತ್ತ ರಾಜ್ಯ ಸರ್ಕಾರದ ಖಜಾನೆಯಿಂದ ಹೊರಗಿದೆ. ಈ ಕುರಿತು ತಕ್ಷಣವೇ ಸರ್ಕಾರ ಶ್ವೇತಪತ್ರ ಪ್ರಕಟಿಸಬೇಕು ಎಂದು ಕಾಂಗ್ರೆಸ್‌ನ ಎಚ್‌.ಕೆ. ಪಾಟೀಲ ಗುರುವಾರ ವಿಧಾನಸಭೆಯಲ್ಲಿ ಆಗ್ರಹಿಸಿದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಾನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಈ ಕುರಿತು ಕೆಲವು ಮಾಹಿತಿ ಲಭಿಸಿತ್ತು. ಪರಿಶೀಲನೆ ನಡೆಸುವಂತೆ ಸಮಿತಿಯಿಂದ ಪ್ರಧಾನ ಲೆಕ್ಕ ನಿಯಂತ್ರಕರಿಗೆ ಪತ್ರ ಬರೆಯಲಾಗಿತ್ತು. ಈಗ ಪ್ರಧಾನ ಲೆಕ್ಕ ನಿಯಂತ್ರಕರಿಂದ ಬಂದಿರುವ ವರದಿ ಅದನ್ನು ಸಾಬೀತುಪಡಿಸಿದೆ’ ಎಂದರು.

76 ಪಿ.ಡಿ ಖಾತೆಗಳಲ್ಲಿ ₹ 4,421.26 ಕೋಟಿ ಠೇವಣಿ ಇದೆ. ಕೆಲವು ಇಲಾಖೆಗಳ ಅಧಿಕಾರಿಗಳು ಪ್ರತ್ಯೇಕ ಪಿ.ಡಿ ಖಾತೆಗಳಲ್ಲಿ ಇರಿಸಿರುವ ₹ 2,741 ಕೋಟಿ ಮುರು ವರ್ಷಗಳಿಂದ ಬಳಕೆಯಾಗದೆ ಉಳಿದಿದೆ. ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆಯಾಗಿದ್ದ ₹ 10,000 ಕೋಟಿಯನ್ನು ಅಧಿಕಾರಿಗಳು ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದ್ದಾರೆ. ಈ ಹಣ ಖಜಾನೆ ಇಲಾಖೆಯಿಂದ ಹೊರಗೆ ಉಳಿದುಕೊಂಡಿದೆ ಎಂದು ಪ್ರಧಾನ ಲೆಕ್ಕ ನಿಯಂತ್ರಕರು ಹಣಕಾಸು ಇಲಾಖೆಗೆ ಬರೆದಿರುವ ಪತ್ರವನ್ನು ಪ್ರದರ್ಶಿಸಿದರು.

ADVERTISEMENT

‘ಇಷ್ಟೊಂದು ದೊಡ್ಡ ಮೊತ್ತದ ಅನುದಾನ ಖಜಾನೆಯಿಂದ ಹೊರಕ್ಕೆ ಇರುವುದರಿಂದ ದುರ್ಬಳಕೆ ಆಗುವ ಸಾಧ್ಯತೆ ಇದೆ ಎಂದು ಲೆಕ್ಕ ನಿಯಂತ್ರಕರು ಸಂಶಯ ವ್ಯಕ್ತಪಡಿಸಿದ್ದಾರೆ. ಇಂತಹ ಲೋಪಗಳಿಗೆ ಆರ್ಥಿಕ ಇಲಾಖೆಯ ಕೋಡ್‌ಗಳೇ ಕಾರಣ. ತಕ್ಷಣವೇ ಕೋಡ್‌ಗಳ ಪರಿಷ್ಕರಣೆ ಆಗಬೇಕು. ₹ 17,000 ಕೋಟಿ ಮೊತ್ತ ಎಲ್ಲೆಲ್ಲಿ ಇದೆ ಎಂಬುದರ ಸಮಗ್ರ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

ಹುದ್ದೆ ತುಂಬದೆ ವಂಚನೆ: ಈಗ ಎಲ್ಲರೂ ಮೀಸಲಾತಿಯ ಕುರಿತು ತೋಳೇರಿಸಿ ಮಾತನಾಡುತ್ತಿದ್ದಾರೆ. ಆದರೆ, 15 ವರ್ಷಗಳಿಂದ ರಾಜ್ಯ ಸರ್ಕಾರದ 2.5 ಲಕ್ಷ ಹುದ್ದೆಗಳನ್ನು ಖಾಲಿ ಇಡಲಾಗಿದೆ. ಎಲ್ಲ ಹುದ್ದೆಗಳನ್ನೂ ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುತ್ತಿದೆ. ಮೀಸಲಾತಿಗೆ ಅರ್ಹರಾದವರಿಗೆ ಆರ್ಥಿಕ ಮುಗ್ಗಟ್ಟಿನ ಕಾರಣ ನೀಡಿ ವಂಚಿಸಲಾಗಿದೆ ಎಂದು ಪಾಟೀಲ ದೂರಿದರು.

ವಿಶೇಷ ಕಾರ್ಯಕ್ರಮ ರೂಪಿಸಲು ಸಲಹೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸದೇ ಇರುವುದಕ್ಕೆ ಎಚ್‌.ಕೆ. ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಮಾದರಿಯಲ್ಲಿ ವಿಶೇಷ ಕಾರ್ಯಕ್ರಮ ರೂಪಿಸುವಂತೆ ಆಗ್ರಹಿಸಿದ ಅವರು, 750 ಗ್ರಾಮೀಣ ಶಾಲೆಗಳ ಅಭಿವೃದ್ಧಿ ಮಾಡುವಂತೆ ಸಲಹೆ ನೀಡಿದರು.

‘ಐಎಎಸ್‌, ಐಪಿಎಸ್‌ ಖಾಸಗೀಕರಣವಾಗಲಿ’

ಎಚ್‌.ಕೆ. ಪಾಟೀಲ ಮೀಸಲಾತಿ ಕುರಿತು ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ, ‘ರೈಲ್ವೆ, ಎಲ್‌ಐಸಿ ಎಲ್ಲವೂ ಖಾಸಗೀಕರಣ. ಐಎಎಸ್‌, ಐಪಿಎಸ್‌ ಕೂಡ ಖಾಸಗೀಕರಣವಾಗಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕ ತಮ್ಮ ಸರ್ಕಾರದ ವಿರುದ್ಧದ ಅಸಮಾಧಾನವನ್ನು ಸ್ಫೋಟಗೊಳಿಸಿದ್ದಾರೆ ಎಂದು ಪಾಟೀಲ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.