ADVERTISEMENT

18ರಂದು ಮಂಗಳೂರಿಗೆ ಸೋನಿಯಾ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಮಂಗಳೂರು: ರಾಜ್ಯದ ನೆಲ- ಜಲ ರಕ್ಷಣೆಯ ಪ್ರಶ್ನೆ ಬಂದಾಗ, ಪಕ್ಷದ 71 ಶಾಸಕರೂ ರಾಜೀನಾಮೆ ನೀಡಲು ಸಿದ್ಧ. ಅಂಥ ಸಂದರ್ಭ ಬಂದರೆ ಶಾಸಕರು ನೇರವಾಗಿ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.

ಮಂಗಳೂರಿಗೆ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇದೇ 18ರಂದು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅವರು ಮಂಗಳವಾರ ಕಾಂಗ್ರೆಸ್ ಕಚೇರಿಗೆ ಬಂದು ಪತ್ರಕರ್ತರಿಗೆ ವಿವರ ನೀಡಿದರು.

18ರಂದು ನೆಹರೂ ಮೈದಾನದಲ್ಲಿ ಸಂಜೆ 4 ಗಂಟೆಗೆ ಪಕ್ಷದ ಜನಪ್ರತಿನಿಧಿಗಳ ಸಮಾವೇಶದಲ್ಲಿ ಸೋನಿಯಾ ಪಾಲ್ಗೊಳ್ಳುವರು. ಈ ಸಮಾವೇಶದಲ್ಲಿ ದ.ಕ., ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ವಿವಿಧ ಹಂತಗಳ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸುಮಾರು 15 ರಿಂದ 20 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ ಎಂದರು.

ಸಂಜೆ 6 ಗಂಟೆಗೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮಂಗಳೂರು ದಸರಾವನ್ನು ಉದ್ಘಾಟಿಸಲಿದ್ದಾರೆ ಎಂದರು.

ಆಂತರಿಕ ವಿಚಾರ: ಜಿ.ಪಂ. ಅಧ್ಯಕ್ಷ ಚುನಾವಣೆಗೆ ಸಂಬಂಧಿಸಿ ಕೇಂದ್ರ ಸಚಿವರು ಮತ್ತು ಚಿಂತಾಮಣಿ, ಗೌರಿಬಿದನೂರು ಶಾಸಕರ ನಡುವೆ ಭಿನ್ನಾಭಿಪ್ರಾಯವಿರುವುದು ನಿಜ. ಇದು ಪಕ್ಷದ ಆಂತರಿಕ ವಿಷಯ. ಇದನ್ನು ಬಗೆಹರಿಸಲಾಗುವುದು ಎಂದರು.

ಕಾವೇರಿ ವಿಷಯದಲ್ಲಿ ಕೇಂದ್ರಕ್ಕೆ ನಿಯೋಗ ಒಯ್ಯುವಾಗ ಅದನ್ನು ಸರ್ವಪಕ್ಷ ನಿಯೋಗ ಎಂದು ಸರ್ಕಾರ ಹೇಳಲಿಲ್ಲ. ಬಿಜೆಪಿ ನಿಯೋಗವಾಗಿದ್ದರಿಂದ ನಾವು ಭಾಗವಹಿಸಲಿಲ್ಲ. ಸರ್ವಪಕ್ಷದ ನಿಯೋಗ ಎಂದು ಹೇಳಿದ್ದಲ್ಲಿ ನಾವೂ ಪಾಲ್ಗೊಳ್ಳುತ್ತಿದ್ದೆವು. ಪ್ರತಿ ಬಾರಿ ಕಾವೇರಿ ನೀರು ಹಂಚಿಕೆ ಸಂಬಂಧ ಸಮಸ್ಯೆಯಾದಾಗ, ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
 
ಮಂಗಳೂರಿಗೆ ಸೋನಿಯಾ ಭೇಟಿ ಸಂದರ್ಭ ಲಿಂಗಾಯಿತ ಮುಖಂಡರು ತಮ್ಮ ವಿರುದ್ಧ ದೂರು ನೀಡಲು ಸಿದ್ಧತೆ ನಡೆಸಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪರಮೇಶ್ವರ್, ಬಳಿಕ ಸಮಾವೇಶ ನಡೆಯಲಿರುವ ನೆಹರೂ ಮೈದಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.