ಬೆಂಗಳೂರು: ‘ಜಾತಿ ಜನಗಣತಿಯಲ್ಲಿ ಬಲಾಢ್ಯ ಕುರುಬ ಸಮುದಾಯವನ್ನು ಪ್ರವರ್ಗ 1 ಬಿ ಗೆ ಸೇರಿಸುವ ಮೂಲಕ 350ಕ್ಕೂ ಹೆಚ್ಚು ಅತಿ ದುರ್ಬಲ ಮತ್ತು ಸಣ್ಣ ಸಣ್ಣ ಹಿಂದುಳಿದ ಜಾತಿಗಳಿಗೆ ಅನ್ಯಾಯ ಮಾಡಲಾಗಿದೆ’ ಎಂದು ಶಾಸಕ ವಿ.ಸುನಿಲ್‌ಕುಮಾರ್ ಟೀಕಿಸಿದ್ದಾರೆ.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಪ್ರತಿನಿಧಿಸುವ ಕುರುಬ ಸಮಾಜವನ್ನು ಪ್ರವರ್ಗ 1 ಬಿಗೆ ಸೇರಿಸಿರುವುದು ಸ್ವಜಾತಿ ಪ್ರೇಮ ಮತ್ತು ರಾಜಕೀಯ ಪ್ರೇರಿತ. ಈ ಮೂಲಕ ಅತಿ ಹಿಂದುಳಿದ ಮತ್ತು ಧ್ವನಿ ಇಲ್ಲದ ಜಾತಿಗಳನ್ನು ದಮನ ಮಾಡುವ ಪ್ರಯತ್ನ ನಡೆದಿದೆ’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಅಚ್ಚರಿ ಎಂದರೆ, ಸುಮಾರು 400ಕ್ಕೂ ಹೆಚ್ಚು ಸಣ್ಣ ಸಣ್ಣ ಹಿಂದುಳಿದ ಜಾತಿಗಳ ಜನರು ಇಲ್ಲಿಯವರೆಗೆ ಕನಿಷ್ಠ ಗ್ರಾಮ ಪಂಚಾಯಿತಿ ಸದಸ್ಯರಾಗಲೂ ಸಾಧ್ಯವಾಗಿಲ್ಲ. ಅಂತಹ ಹಿಂದುಳಿದ ಜಾತಿಗಳ ಸಾಲಿಗೆ ಕುರುಬ ಸಮುದಾಯವನ್ನು ಸೇರಿಸಲಾಗಿದೆ. ಹೀಗಾಗಿ ಸಣ್ಣ ಸಣ್ಣ ಸಮುದಾಯಗಳ ಜನರು ಎಲ್ಲ ಬಗೆಯ ಅವಕಾಶಗಳಿಂದಲೂ ವಂಚಿತರಾಗುವುದು ನಿಶ್ಚಿತ. 43 ಲಕ್ಷ ಜನ ಸಂಖ್ಯೆ ಇರುವ ಕುರುಬ ಸಮುದಾಯದ ಜತೆ ದುರ್ಬಲ ಹಿಂದುಳಿದ ಜಾತಿ ಜನರು ಸ್ಪರ್ಧೆ ಮಾಡಲು ಸಾಧ್ಯವೇ’ ಎಂದು ಸುನಿಲ್‌ಕುಮಾರ್ ಪ್ರಶ್ನಿಸಿದರು.
‘ಅತಿ ಹಿಂದುಳಿದ ಸಮಾಜಗಳನ್ನು ಈ ವರದಿ ಉದ್ದೇಶಪೂರ್ವಕವಾಗಿ ಪ್ರಪಾತಕ್ಕೆ ತಳ್ಳಿದೆ. 1 ಬಿ ಪ್ರವರ್ಗ ಸೃಷ್ಟಿಸಿ ಸಣ್ಣ ಜಾತಿಗಳಿಗೆ ಯಾವ ನ್ಯಾಯ ಕೊಡಲು ಸಾಧ್ಯ? ಪ್ರವರ್ಗ 2 ಎ ನಲ್ಲಿರುವ ಉಳಿದ ಜಾತಿಗಳನ್ನು ಬಿಟ್ಟು ಕುರುಬ ಸಮುದಾಯವನ್ನು ಮಾತ್ರ 1 ಬಿ ಗೆ ಹಾಕಿದ್ದಾರೆ. ಇದನ್ನು ವೈಜ್ಞಾನಿಕ ಎನ್ನಲು ಸಾಧ್ಯವೇ? ಇದು ಅಪ್ಪಟ್ಟ ರಾಜಕೀಯ ದುರುಪಯೋಗ. ಜನಸಂಖ್ಯೆಯ ಕಡಿಮೆ ಆಗಿದೆ ಎನ್ನುವುದಕ್ಕಿಂತ ಹಿಂದುಳಿದ ವರ್ಗಗಳಿಗೆ ಈ ವರದಿ ದೊಡ್ಡ ಅನ್ಯಾಯ ಮಾಡಿದೆ. ಪ್ರಮುಖವಾಗಿ ಪಾಸಾಚಾರಿ, ಮೇರು ಶಿಕಾರಿ, ಕಾವಡಿ, ತಿರಳಿ, ಬುರುಡೆ ಸಿದ್ದಯ್ಯ, ಅಲೆಮಾರಿ, ಅರೆ ಅಲೆಮಾರಿ, ಮರಾಠ, ಈಡಗಿ, ಸವಿತಾ, ಯಾದವ ಸಮುದಾಯ ಸೇರಿವೆ’ ಎಂದರು.
‘ಸಿದ್ದರಾಮಯ್ಯ ಅವರು ಈ ಜಾತಿ ಜನಗಣತಿ ಮೂಲಕ ಸಬ್ ಕಾ ವಿಭಜನ್ ಸಬ್ ಕಾ ಶೋಷಣ್ ಎಂಬ ಘೋಷಣೆಯನ್ನು ಇಟ್ಟುಕೊಂಡಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ತಮಗೆ ಬೇಕಾದಂತೆ ಜನಗಣತಿ ಬರೆಸಿರುವ ಅನುಮಾನವಿದೆ’ ಎಂದು ಹೇಳಿದರು.
‘ಕಾಂತರಾಜು ಅವರ ಮೂಲ ವರದಿಯೇ ಇಲ್ಲ. ಅಂದ ಮೇಲೆ ಜಯಪ್ರಕಾಶ್ ಹೆಗ್ಡೆ ಹೇಗೆ ವರದಿ ತಯಾರು ಮಾಡಿದರು. ಮೂಲ ವರದಿ ಸಿಗದೇ ಈ ವರದಿ ತಯಾರು ಮಾಡಲು ಹೇಗೆ ಸಾಧ್ಯ? ಸಿದ್ದರಾಮಯ್ಯ ಅವರೇ ನಿಮಗೆ ರಾಜಕೀಯ ಲಾಭ ಆಗುವುದಿಲ್ಲ ಎಂದು ಆ ವರದಿಯನ್ನು ಎಲ್ಲಿ ಬಚ್ಚಿಟ್ಟಿದ್ದೀರಿ’ ಎಂದು ಅವರು ಪ್ರಶ್ನಿಸಿದರು.
‘ಈ ವರದಿ ವೈಜ್ಞಾನಿಕವಾಗಿಲ್ಲ. ಸಂವಿಧಾನಕ್ಕೆ ನಿಷ್ಠೆ ತೋರುವಲ್ಲಿ ವರದಿ ವಿಫಲವಾಗಿದೆ. ಯಾವುದೇ ಜಾತಿಯ ನಿಖರ ಮಾಹಿತಿಯನ್ನು ನೀಡುವಲ್ಲಿಯೂ ವಿಫಲವಾಗಿದೆ. ಆದ್ದರಿಂದ ವಿಶೇಷ ಅಧಿವೇಶನ ಕರೆದು ಈ ವರದಿ ಬಗ್ಗೆ ಸರ್ಕಾರ ಚರ್ಚಿಸಬೇಕು’ ಎಂದು ಸುನಿಲ್‌ಕುಮಾರ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.