ADVERTISEMENT

2ನೇ ದಲಿತ ಸಾಹಿತ್ಯ ಸಾಂಸ್ಕೃತಿಕ ಕಲಾ ಸಪ್ತಾಹ ಆರಂಭ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:30 IST
Last Updated 17 ಜನವರಿ 2011, 19:30 IST

ಚಾಮರಾಜನಗರ:‘ಮಠಗಳು ಕಪ್ಪುಹಣ ಇಡುವ ಕೇಂದ್ರಸ್ಥಾನಗಳಾಗುತ್ತಿದ್ದು, ಅಕ್ರಮವಾಗಿ ಜಮೀನು ಒತ್ತುವರಿ ಕೂಡ ಮಾಡುತ್ತಿವೆ. ಹೀಗಾದರೆ, ನ್ಯಾಯ-ಧರ್ಮ ಉಳಿಯುತ್ತದೆಯೇ?’ ಎಂದು ಸಾಹಿತಿ ದೇವನೂರು ಮಹದೇವ ಪ್ರಶ್ನಿಸಿದರು.ನಗರದಲ್ಲಿ ಸೋಮವಾರ ಆರಂಭವಾದ 2ನೇ ದಲಿತ ಸಾಹಿತ್ಯ ಸಾಂಸ್ಕೃತಿಕ ಕಲಾ ಸಪ್ತಾಹದಲ್ಲಿ ಅವರು ಮಾತನಾಡಿದರು.
 
ಅನ್ಯಾಯ, ದರೋಡೆ ತಾಂಡವವಾಡುತ್ತಿವೆ. ಇದನ್ನು ಪ್ರಶ್ನಿಸಬೇಕಾದ ಸಾಮಾಜಿಕ ಪ್ರಜ್ಞೆಗೆ ಕುಷ್ಠರೋಗ ಬಂದಿದೆ. ಚುನಾವಣೆಯಲ್ಲಿ ಹಣದ ಥೈಲಿ ಹೆಚ್ಚಿದೆ. ಜನಪ್ರತಿನಿಧಿ ಈಗ ಮನುಷ್ಯನಾಗಿ ಉಳಿದಿಲ್ಲ. ಪ್ರತಿಯೊಬ್ಬರ ಮೇಲೂ ಸಾಲದ ಹೊರೆ ಏರುತ್ತಿದೆ. ಯಾರೊಬ್ಬರಿಗೂ ಮಾತನಾಡಲು ಅವಕಾಶವಿಲ್ಲದಂತಾಗಿದೆ ಎಂದು ವಿಷಾದಿಸಿದರು.

ಗಣಿ ಧಣಿಗಳು ರಾಜ್ಯದ ಗಡಿಕಲ್ಲು ಕಿತ್ತು ಹಾಕಿದ್ದಾರೆ. ಅಧಿಕಾರಿಗಳೇ ಜಪ್ತಿ ಮಾಡಿದ್ದ ಅಕ್ರಮ ಅದಿರು ದಾಸ್ತಾನು ಮಂಗಮಾಯವಾಗಿದೆ. ರಾಜ್ಯ ಸರ್ಕಾರ ಜೀವಂತವಾಗಿ ಇದೆಯೇ? ಎಂದು ವ್ಯಂಗ್ಯವಾಡಿದರು.

ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಸಪ್ತಾಹಕ್ಕೆ ಚಾಲನೆ ನೀಡಿದರು. ಮಂಟೇಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುದೇವರಾಜೇ ಅರಸ್, ಸಾಹಿತಿಗಳಾದ ಅರವಿಂದ ಮಾಲಗತ್ತಿ, ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ.ಮಲೆಯೂರು ಗುರುಸ್ವಾಮಿ, ಸಪ್ತಾಹ ಸಮಿತಿ ಅಧ್ಯಕ್ಷ ವೆಂಕಟರಮಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.