ADVERTISEMENT

2023 ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ': ಸಚಿವ ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 11:22 IST
Last Updated 19 ಅಕ್ಟೋಬರ್ 2022, 11:22 IST
ಸಚಿವ ಬಿ.ಸಿ.ಪಾಟೀಲ
ಸಚಿವ ಬಿ.ಸಿ.ಪಾಟೀಲ   

ಬೆಂಗಳೂರು: ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಒಕ್ಕೂಟ (ಎಫ್‌ಎಒ) 2023 ಅನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ವಾಗಿ ಘೋಷಿಸಿರುವುದರಿಂದ ಜನವರಿ 20 ರಿಂದ 22 ರವರೆಗೆ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಸಿರಿ ಧಾನ್ಯಗಳ ಮೇಳವನ್ನು ಆಯೋಜಿಸಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಈ ಮೂರು ದಿನಗಳಲ್ಲಿ ರೈತರು, ಕೃಷಿ ವಿಜ್ಞಾನಿಗಳು ಮತ್ತು ಈ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರು ಭಾಗವಹಿಸಲಿದ್ದು, ಕಾರ್ಯಾಗಾರಗಳಲ್ಲಿ ಭಾಗವಹಿಸಲಿದ್ದಾರೆ. ಇದರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲು ಮುಖ್ಯಮಂತ್ರಿಯವರನ್ನು ಕೋರಲಾಗುವುದು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಉತ್ತರ ಪ್ರದೇಶ ಆಗ್ರಾದಲ್ಲಿ ಸಿರಿಧಾನ್ಯ ಮೇಳವನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಯುರೋಪ್‌ ನಲ್ಲಿ ಅಲ್ಲದೆ, ದೆಹಲಿ ಮತ್ತು ಹೈದರಾಬಾದ್‌ಗಳಲ್ಲೂ ಪೂರ್ವಭಾವಿ ಮೇಳಗಳನ್ನು ಹಮ್ಮಿಕೊಂಡಿದ್ದು, ಬೆಂಗಳೂರಿನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು ಎಂದರು.

ADVERTISEMENT

ರಾಜ್ಯದಲ್ಲಿ ಸಿರಿಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಿದಾಗ ಅದರ ಬೆಲೆ ತಗ್ಗಲಿದೆ. ಇದಕ್ಕಾಗಿ ಶಾಲೆಗಳಲ್ಲಿ ಬಿಸಿಯೂಟಕ್ಕೆ, ಸಮಾಜ ಕಲ್ಯಾಣ ಇಲಾಖೆ ಪೌಷ್ಠಿಕ ಆಹಾರ ವಿತರಣೆ ಯೋಜನೆಯಲ್ಲಿ ಇದನ್ನು ಅಳವಡಿಸುವ ಉದ್ದೇಶವಿದೆ ಎಂದು ಪಾಟೀಲ ಹೇಳಿದರು.

ಕೃಷಿ ಸಂಜೀವಿನಿ ವಾಹನ ಹೆಚ್ಚಳ

‘ಕೃಷಿ ಸಂಜೀವಿನಿ’ ಯೋಜನೆಯಡಿ ಹೊಸದಾಗಿ 64 ವಾಹನಗಳನ್ನು (ಸಂಚಾರಿ ಪ್ರಯೋಗಾಲಯ) ಖರೀದಿಸಿ ಸೇವೆಗೆ ಒಳಸಲಾಗುವುದು. ಲ್ಯಾಬ್‌ ಟು ಲ್ಯಾಂಡ್‌ ಪರಿಕಲ್ಪನೆಯಡಿ ಈ ವಾಹನಗಳು 108 ಆಂಬುಲೆನ್ಸ್‌ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಕೃಷಿಯ ವೇಳೆಯಲ್ಲಿ ಯಾವುದೇ ಸಮಸ್ಯೆ ಉಂಟಾದರೆ ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿದರೆ ಈ ವಾಹನ ಅಲ್ಲಿಗೆ ತೆರಳಿ, ಅಗತ್ಯ ಪರಿಹಾರವನ್ನು ಕಲ್ಪಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಹಿಂಗಾರು ಬಿತ್ತನೆ

ಹಿಂಗಾರು ಬಿತ್ತನೆ ಗುರಿ 26.68 ಲಕ್ಷ ಹೆಕ್ಟರ್‌ ಇದ್ದು, ಈವರೆಗೆ 2.25 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಮುಂಗಾರಿನಲ್ಲಿ 82.67 ಲಕ್ಷ ಹೆಕ್ಟೇರ್‌ ಗುರಿ ಹಾಕಿಕೊಳ್ಳಲಾಗಿತ್ತು. 80.40 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಆಹಾರ ಧಾನ್ಯ ಉತ್ಪಾದನೆಯಲ್ಲಿ ಕಡಿಮೆ ಆಗುವುದಿಲ್ಲ ಎಂದು ಸಚಿವರು ಹೇಳಿದರು.

ಈ ಬಾರಿಯ ಮಳೆ ಮತ್ತು ಪ್ರವಾಹದಿಂದ 10.29 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದ್ದು, ಈವರೆಗೆ ₹1020 ಕೋಟಿ ಪರಿಹಾರ ವಿತರಿಸಲಾಗಿದೆ. ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ 10.06 ಲಕ್ಷ ರೈತರ ಮಕ್ಕಳಿಗೆ ₹441.27 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು.

ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ 1139 ರೈತ ಉತ್ಪಾದಕ ಸಂಘಗಳನ್ನು (ಎಫ್‌ಪಿಒ) ಈಗಾಗಲೇ ಅನುಷ್ಟಾನಗೊಳಿಸುತ್ತಿದ್ದು, ಹೆಚ್ಚುವರಿಯಾಗಿ 100 ಎಫ್‌ಪಿಒಗಳನ್ನು ರಾಜ್ಯಕ್ಕೆ ಘೋಷಿಸಿದೆ. ಪ್ರತಿಯೊಂದು ಎಫ್‌ಪಿಒಗಳಲ್ಲಿ 300 ಸದಸ್ಯರಿರುತ್ತಾರೆ. ಕೇಂದ್ರ ಸರ್ಕಾರ ಪ್ರತಿ ಎಫ್‌ಪಿಒಗೂ ತಲಾ ₹58 ಲಕ್ಷ ಮೂರು ವರ್ಷಗಳ ಅವಧಿಗೆ ನೀಡುತ್ತದೆ ಎಂದು ಬಿ.ಸಿ.ಪಾಟೀಲ ಹೇಳಿದರು.

ಭೀಮಾ ಪಲ್ಸಸ್‌’ ತೊಗರಿ ಬ್ರ್ಯಾಂಡ್ ಬಿಡುಗಡೆ

ಭೌಗೋಳಿಕ ಸೂಚ್ಯಂಕ ಪಡೆದಿರುವ ಕಲಬುರಗಿ ತೊಗರಿ ಬೇಳೆಯನ್ನು ‘ಭೀಮಾ ಪಲ್ಸಸ್‌’ ಎಂಬ ಬ್ರ್ಯಾಂಡ್‌ ಅಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರತಿ ವರ್ಷ 6 ರಿಂದ 7 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು 6 ಲಕ್ಷ ಟನ್‌ಗೂ ಹೆಚ್ಚು ತೊಗರಿ ಬೆಳೆಯಲಾಗುತ್ತಿದೆ. ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಭೀಮಾ ಪಲ್ಸಸ್‌ ಬ್ರ್ಯಾಂಡ್ ಅಡಿ ಮಾರುಕಟ್ಟೆ ಕಲ್ಪಿಸಿದಾಗ ಉತ್ತಮ ಬೆಲೆ ಸಿಗಲಿದೆ ಎಂದು ಹೇಳಿದರು.

ಈ ತೊಗರಿ ಬೇಳೆಯು ಹೆಚ್ಚಿನ ಪೌಷ್ಟಿಕತೆಯನ್ನು ಹೊಂದಿದೆ, ಬೇಯಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಕುದಿಸಿದ ಬೇಳೆ ಬೇಗ ಹಾಳಾಗುವುದಿಲ್ಲ, ಒಳ್ಳೆಯ ಸುವಾಸನೆಯನ್ನು ಹೊಂದಿರುವುದರ ಜತೆಗೆ ರುಚಿಕರವಾಗಿರುತ್ತದೆ ಎಂದು ಪಾಟೀಲ ವಿವರಿಸಿದರು.

ಸತ್ಯಹರಿಶ್ಚಂದ್ರನ ತುಂಡುಗಳಂತೆ ವರ್ತಿಸುತ್ತಿರುವ ಕಾಂಗ್ರೆಸ್‌

ಸತ್ಯಹರಿಶ್ಚಂದ್ರನ ತುಂಡುಗಳಂತೆ ವರ್ತಿಸುತ್ತಿರುವ ಕಾಂಗ್ರೆಸ್‌ ನಾಯಕರು ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಟೀಕೆ– ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತಂದಿದ್ದೇವೆ. ಅದಲ್ಲದೆ ಪಿಎಂ ಕಿಸಾನ್‌ ಯೋಜನೆಯಡಿ ಕೇಂದ್ರದಿಂದ ರೈತನಿಗೆ ತಲಾ ₹ 6 ಸಾವಿರ ಮತ್ತು ರಾಜ್ಯದ ವತಿಯಿಂದ ₹4 ಸಾವಿರದಂತೆ ವರ್ಷಕ್ಕೆ ₹ 10 ಸಾವಿರ ನೀಡಲಾಗುತ್ತಿದೆ. ಕಾಂಗ್ರೆಸ್‌ನವರು ಇಂತಹ ಯೋಜನೆಯನ್ನೇನಾದರೂ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಅಲ್ಲದೆ, ರೈತ ವಿದ್ಯಾನಿಧಿಯಡಿ ಕೃಷಿಕರು, ಕೃಷಿ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇಂತಹದ್ದೊಂದು ಯೋಜನೆ ದೇಶದ ಯಾವುದೇ ರಾಜ್ಯದಲ್ಲೂ ಇಲ್ಲ. ಕಾಂಗ್ರೆಸ್‌ನವರ ಕಣ್ಣಿಗೆ ಇವೆಲ್ಲ ಕಾಣುವುದಿಲ್ಲ. ಎಲ್ಲವನ್ನೂ ಕಾಮಾಲೆ ಕಣ್ಣಿನಿಂದಲೇ ನೋಡುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.