ADVERTISEMENT

2.2 ಲಕ್ಷ ಮೌಲ್ಯದ ಸೀರೆ ವಶ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 19:59 IST
Last Updated 24 ಏಪ್ರಿಲ್ 2013, 19:59 IST

ದಾವಣಗೆರೆ: ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರೂ 10 ಲಕ್ಷ ನಗದು ಮತ್ತು ರೂ 2.20 ಲಕ್ಷ ಮೌಲ್ಯದ 89 ಸೀರೆಗಳನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಚುನಾವಣಾ ಜಾಗೃತ ದಳದ ಅಧಿಕಾರಿಗಳು ಮತ್ತು ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ.

ನಗರದ ಪಿಬಿ ರಸ್ತೆಯ ಕೈಗಾರಿಕಾ ಪ್ರದೇಶದ ಸಮೀಪ ಚೆಕ್‌ಪೋಸ್ಟ್‌ನಲ್ಲಿ ಬೈಕ್‌ನಲ್ಲಿ ಸಾಗಿಸುತ್ತಿದ್ದ ರೂ 10 ಲಕ್ಷವನ್ನು ವಶಪಡಿಸಿಕೊಂಡು ಅಶೋಕ್ ಎಂಬುವರನ್ನು ಬಂದಿಸಲಾಗಿದೆ. ಈ ಮೊತ್ತವು ಶ್ರೀ ರಾಮ್ ಫೈನಾನ್ಸ್‌ಗೆ ಸೇರಿದೆ.

ಮಂಗಳವಾರ ನಡೆದ ವಾಹನ ಹರಾಜಿನ ಮೊತ್ತವನ್ನು ತಾನು ಬಾತಿಯ ಕಚೇರಿಯಿಂದ ದಾವಣಗೆರೆ ಕಚೇರಿಗೆ ಒಯ್ಯುತ್ತಿದ್ದದ್ದಾಗಿ ಅಶೋಕ್ ಹೇಳಿದ್ದಾರೆ. ಆದರೆ, ಅವರ ಬಳಿ ಸೂಕ್ತ ದಾಖಲೆ ಇಲ್ಲದ ಕಾರಣ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾಗೃತ ದಳದ ಅಧಿಕಾರಿ ಎಚ್.ಪಿ. ನಾಗರಾಜ್ ಹಾಗೂ ಪಿಎಸ್‌ಐ ಸಿದ್ದೇಶ್ ಹೇಳಿದರು.

ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನಿಂದ ನಗರದತ್ತ ಬರುತ್ತಿದ್ದ ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ ರೂ 2.20 ಲಕ್ಷ ಮೌಲ್ಯದ 89 ಸೀರೆಗಳನ್ನು ಚುನಾವಣಾ ಜಾಗೃತದಳದ ಅಧಿಕಾರಿಗಳು ಮತ್ತು ಗ್ರಾಮಾಂತರ ಠಾಣೆ ಪೊಲೀಸರು ತಾಲ್ಲೂಕಿನ ಹೆಬ್ಬಾಳು ಟೋಲ್‌ಗೇಟ್ ಬಳಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡಿನ ಸೇಲಂ ಮೂಲದ ಪ್ರಕಾಶ್ ಭಾರತಿ ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಸೀರೆಗಳು ಯಾರಿಗೆ ಸೇರಿದ್ದು ಎಂಬುದು ಗೊತ್ತಾಗಿಲ್ಲ. ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಕಾರಣಕ್ಕೆ ವಶಪಡಿಸಿಕೊಳ್ಳಲಾಗಿದೆ ಎಂದು ತಂಡದ ನೇತೃತ್ವ ವಹಿಸಿದ್ದ ಗ್ರಾಮಾಂತರ ಠಾಣೆ ಪಿಎಸ್‌ಐ ಇ.ವೈ. ಕಿರಣ್ ಕುಮಾರ್ ತಿಳಿಸಿದರು.

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಮತ್ತು ಬುಧ ವಾರ ಪ್ರತ್ಯೇಕಪ್ರಕರಣಗಳಲ್ಲಿಸುಮಾರು ರೂ. 60 ಸಾವಿರ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಶಿಡ್ಲಘಟ್ಟ: ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 40 ಸಾವಿರ ರೂಪಾಯಿ ಮೌಲ್ಯದ 18 ಕೇಸ್ ಮದ್ಯವನ್ನು ಚುನಾವಣಾ ಪ್ಲೈಯಿಂಗ್ ಸ್ಕ್ವಾಡ್ ಮತ್ತು ಸ್ಥಳೀಯ ಅಬಕಾರಿ ಪೋಲಿಸರು ಬುಧವಾರ ಬೆಳಿಗ್ಗೆ ವಶಪಡಿಸಿಕೊಂಡಿದ್ದಾರೆ.

 ತಾಲ್ಲೂಕಿನ ಮಳ್ಳೂರು ಗ್ರಾಮದ ನಾರಾಯಣಸ್ವಾಮಿ ಅವರ ಹುಳು ಸಾಕಾಣಿಕೆ ಮನೆಯ ಹಿಂಭಾಗದಲ್ಲಿ ಮದ್ಯದ ಬಾಕ್ಸ್‌ಗಳನ್ನು ಅಡಗಿಸಿಡಲಾಗಿತ್ತು. ಆರೋಪಿ ನಾರಾಯಣಸ್ವಾಮಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಇಲ್ಲಿವರೆಗೆ  11.51 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಂಡಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.