ADVERTISEMENT

23ರಂದು ದಂತ ಸಿಂಹಾಸನಾರೋಹಣ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ಹೊಸನಗರ (ಶಿವಮೊಗ್ಗ ಜಿಲ್ಲೆ): ಇಲ್ಲಿನ ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವದ ಅಂಗವಾಗಿ ಏ. 23ರಂದು ವಿಶ್ವದ ಏಕೈಕ ದಂತ ಸಿಂಹಾಸನಾರೋಹಣ, ಅಡಕೆಯಲ್ಲಿ ತುಲಾಭಾರ, ಅಡ್ಡಪಲ್ಲಕ್ಕಿ ಉತ್ಸವ, ಕಿರೀಟೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ ಎಂದು ನಿರ್ವಹಣೆ ಸಮಿತಿಯ ಅಧ್ಯಕ್ಷ ಸಂಪೆಕಟ್ಟೆ ಕುಮಾರ್ ಹೇಳಿದರು.

ಐದು ವರ್ಷಗಳ ಹಿಂದೆ ಅಪರೂಪದ ದಂತ ಸಿಂಹಾಸನಾರೋಹಣ, ಕಿರೀಟೋತ್ಸವ ನಡೆದಿತ್ತು. ಈಗ ಮತ್ತೆ ರಾಮೋತ್ಸವ ಮುಕ್ತಾಯದ ತರುವಾಯ ಅಂತಹ ವಿಶೇಷ ಕಾರ್ಯಕ್ರಮಕ್ಕೆ ಅವಕಾಶ ಲಭ್ಯವಾಗಿದೆ. ಮಹಾಮಂಡಲದ ನೇತೃತ್ವದಲ್ಲಿ ವಿವಿಧ ಸೇವೆಗಳು ನಡೆಯಲಿರುವುದಾಗಿ ಕುಮಾರ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಪುರಪ್ರವೇಶ ಕಾರ್ಯಕ್ರಮ ಏ. 13ರಂದು ಸಂಜೆ 4.30ಕ್ಕೆ ನೆರವೇರಲಿದೆ. ಈ ಮೂಲಕ ವಿಜಯ ನಾಮ ಸಂವತ್ಸರದ ರಾಮೋತ್ಸವಕ್ಕೆ ಚಾಲನೆ ದೊರೆಯಲಿದೆ. ಇದಕ್ಕೂ ಮುನ್ನ ರಾಮೋತ್ಸವದಲ್ಲಿ ಗಾಯನ, ನೃತ್ಯ, ಚಿತ್ರವೈಭವಗಳ ವಿಶೇಷ ಪ್ರವಚನ ರಾಮಕಥಾ 14 ರಿಂದ ಏ. 18ರವರೆಗೆ ಸಂಜೆ ನಡೆಯಲಿದೆ.  19ರಂದು ಪುರುಷೋತ್ತಮ ಮತ್ತು ಶ್ರೀಮಾತಾ ಪ್ರಶಸ್ತಿ ಪ್ರದಾನಗೊಳ್ಳಲಿದೆ. ಅಂದು ರಥೋತ್ಸವ ಕೂಡಾ ಜರುಗಲಿದೆ. 20 ರಂದು ಧನ್ಯಸೇವಕ ಪ್ರಶಸ್ತಿ ಕೊಡಲಾಗುವುದು. ಜೀವನದಾನ, ಯೋಗ ಪಟ್ಟಾಭಿಷೇಕ, ಪುಷ್ಪ ರಥೋತ್ಸವ, ರಾಮ ಜನ್ಮೋತ್ಸವ, ಸೀತಾ ಕಲ್ಯಾಣೋತ್ಸವ ಮತ್ತು ರಾಮ ಸಾಮ್ರಾಜ್ಯ ಪಟ್ಟಾಭಿಷೇಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ಜರುಗಲಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.