ADVERTISEMENT

23ರಂದು ಯದುವೀರ್ ದತ್ತು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2015, 19:30 IST
Last Updated 12 ಫೆಬ್ರುವರಿ 2015, 19:30 IST

ಮೈಸೂರು: ಶ್ರೀಕಂಠದತ್ತ ನರಸಿಂಹರಾಜ ಒಡೆ­ಯರ್‌ ಅವರ ಹಿರಿಯ ಸಹೋದರಿ ದಿವಂಗತ ಗಾಯತ್ರಿದೇವಿ ಅವರ ಮೊಮ್ಮಗ ಯದುವೀರ್‌ ಗೋಪಾಲ್‌­ರಾಜ್‌ ಅರಸ್‌ (23) ಅವರನ್ನು ದತ್ತು ಸ್ವೀಕರಿಸಲು ರಾಜಮನೆತನದವರೆಲ್ಲರೂ ಒಮ್ಮತದಿಂದ ನಿರ್ಧರಿಸಿದ್ದು, ಫೆ. 23ರಂದು ದತ್ತು ಸ್ವೀಕಾರ ನಡೆಯಲಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ತಿಳಿಸಿದರು.

ನಗರದ ಅಂಬಾವಿಲಾಸ ಅರಮನೆ­ಯಲ್ಲಿ ಕುಲದೇವತೆ ಚಾಮುಂಡೇಶ್ವರಿ ದೇವಿ ಮತ್ತು ಮನೆತನದ ಕುಲಪುರುಷ ಶ್ರೀಕೃಷ್ಣಗೆ ನಮಿಸಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯದುವೀರ್‌ ಅವರನ್ನು ನಿಯೋಜಿತ ದತ್ತುಪತ್ರ ಎಂದು ಘೋಷಿಸಲು ಸಂತೋಷ­ಪಡುತ್ತೇನೆ’ ಎಂದು ಗದ್ಗದಿ­ತರಾದರು. ಉಮ್ಮಳಿಸಿ ಬಂದ ದುಃಖದ ನಡುವೆಯೂ ಕಣ್ಣಾಲಿಗಳನ್ನು ಒರೆಸಿಕೊಳ್ಳುತ್ತಲೇ ಪ್ರಕಟಣಾ ಪತ್ರವನ್ನು ಓದಿದ ಅವರು, ನಮ್ಮ ಈ ನಿರ್ಧಾರಕ್ಕೆ ಪತಿ ಶ್ರೀಕಂಠದತ್ತರ ಅನಮೋದನೆ ಮತ್ತು ಆಶೀರ್ವಾದ ಇದೆ ಎಂಬುದು ನನ್ನ ಅಚಲವಾದ ನಂಬಿಕೆ. ಪತಿಯ ಸಹೋ­ದರಿಯರು ಮತ್ತು ಕುಟುಂಬದ­ವರೆಲ್ಲರೂ ಸೇರಿಯೇ ಈ ತೀರ್ಮಾನ ಕೈಗೊಂಡಿದ್ದೇವೆ. ಯದುವಂಶದ ಪರಂಪರೆ, ರೀತಿ–ರಿವಾಜುಗಳಿಗೆ ಅನು­ಗುಣವಾಗಿ ದತ್ತು ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.