ADVERTISEMENT

ಮಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ, ಎಂಜಿನಿಯರ್‌ಗೆ ₹ 25 ಲಕ್ಷ ದಂಡ

3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತೀರ್ಪು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 19:35 IST
Last Updated 10 ನವೆಂಬರ್ 2022, 19:35 IST
ಎನ್. ನರಸಿಂಹ ರಾಜು
ಎನ್. ನರಸಿಂಹ ರಾಜು   

ಮಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಎನ್. ನರಸಿಂಹರಾಜುಗೆ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಮೂರು ವರ್ಷ ಆರು ತಿಂಗಳು ಸಾದಾ ಸಜೆ ಹಾಗೂ ₹ 25 ಲಕ್ಷ ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲವಾದಲ್ಲಿ ಮತ್ತೆ ಆರು ತಿಂಗಳ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ಗುರುವಾರ ತೀರ್ಪು ನೀಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಟೌನ್‌ನ ಎನ್. ನರಸಿಂಹರಾಜು, 2009ರಲ್ಲಿ ಇಲ್ಲಿನ ಲೋಕೋಪಯೋಗಿ ಇಲಾಖೆ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದರು.

ಇವರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಬಗ್ಗೆ 2010 ಮಾರ್ಚ್ 24ರಂದು ಪ್ರಕರಣ ದಾಖಲಾಗಿತ್ತು. ಆಗಿನ ಲೋಕಾಯುಕ್ತ ಪೊಲೀಸ್‌ ಡಿವೈಎಸ್‌ಪಿ ಸದಾನಂದ ವೆರ್ಣೇಕರ್ ಅವರು ನೀಡಿದ ದೂರಿನಂತೆ, ಡಿವೈಎಸ್ಪಿ ವಿಠಲದಾಸ್ ಪೈ ಅವರು ಪ್ರಕರಣದ ತನಿಖೆ ನಡೆಸಿ, 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತದ ವಿಶೇಷ ಸರ್ಕಾರಿ ವಕೀಲ ರವೀಂದ್ರ ಮುನ್ನಿಪಾಡಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ADVERTISEMENT

ಎನ್. ನರಸಿಂಹರಾಜು ವಿರುದ್ಧ 2009ರಲ್ಲಿ ಟ್ರ್ಯಾಪ್‌ ಪ್ರಕರಣ ಕೂಡ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಮಂಗಳೂರು ಲೋಕಾಯುಕ್ತ ಎಸ್ಪಿ ಲಕ್ಷ್ಮಿ ಗಣೇಶ್‌ ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.