ADVERTISEMENT

288 ಪ್ರಕರಣ ಮುಗಿಸಿದ ಲೋಕಾಯುಕ್ತ

2017ರ ಫೆ.1ರಿಂದ ಸೆ.30ರ ಅವಧಿಯಲ್ಲಿ ದಾಖಲಾಗಿದ್ದ 938 ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ಮುಖ್ಯಮಂತ್ರಿ ಸಿದ್ದರಾಮಯ್ಯ,ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ
ಮುಖ್ಯಮಂತ್ರಿ ಸಿದ್ದರಾಮಯ್ಯ,ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ವೈದ್ಯಕೀಯ ಸಚಿವ ಶರಣ ಪ್ರಕಾಶ ಪಾಟೀಲ, ಮುಖ್ಯ ಕಾರ್ಯದರ್ಶಿ ಹಾಗೂ ಕೆಲವು ಐಎಎಸ್‌ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ 288 ಮೊಕದ್ದಮೆಗಳನ್ನು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಮುಕ್ತಾಯಗೊಳಿಸಿದ್ದಾರೆ.

ನ್ಯಾ. ಶೆಟ್ಟಿ, ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ 2017ರ ಫೆ.1ರಿಂದ ಸೆ.30ರ ಅವಧಿಯಲ್ಲಿ ‍ಪ್ರಮುಖ ರಾಜಕಾರಣಿಗಳು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ, ಕರ್ತವ್ಯಲೋಪದ ಆರೋಪದ ಮೇಲೆ ಒಟ್ಟು 938 ಮೊಕದ್ದಮೆಗಳು ದಾಖಲಾಗಿದ್ದವು.

‘ಈ ಪೈಕಿ 288 ಪ್ರಕರಣಗಳನ್ನು ಲೋಕಾಯುಕ್ತರು ಮುಕ್ತಾಯಗೊಳಿಸಿದ್ದಾರೆ’ ಎಂದು ಲೋಕಾಯುಕ್ತ ಸಂಸ್ಥೆಯು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.

ADVERTISEMENT

ಸಿದ್ದರಾಮಯ್ಯ ವಿರುದ್ಧದ ನಾಲ್ಕು, ಶರಣ ಪ್ರಕಾಶ ಪಾಟೀಲ ವಿರುದ್ಧದ ಒಂದು ಪ್ರಕರಣವೂ ಸೇರಿವೆ.

‘ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ವ್ಯಕ್ತಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವು ನೀಡುತ್ತಿದ್ದಾರೆ’ ಎಂದು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಆರ್‌.ರವೀಂದ್ರ ಮೇ 6ರಂದು ದೂರು ದಾಖಲಿಸಿದ್ದರು.

‘ಪೊಲೀಸ್‌ ಅಧಿಕಾರಿಗಳ ವರ್ಗಾವಣೆಗಳಲ್ಲಿ  ಮುಖ್ಯಮಂತ್ರಿ ಸೇರಿ 28 ಹಾಲಿ ಮತ್ತು ಮಾಜಿ ಸಚಿವರು ಹಸ್ತಕ್ಷೇಪ ಮಾಡಿದ್ದಾರೆ’ ಎಂದು ಆರೋಪಿಸಿ ಅಖಿಲ ಕರ್ನಾಟಕ ಪೊಲೀಸ್‌ ಮಹಾ ಸಂಘದ ಅಧ್ಯಕ್ಷ ವಿ. ಶಶಿಧರ್‌ ಮೇ 4ರಂದು ಪ್ರಕರಣ ದಾಖಲಿಸಿದ್ದರು.‌

ಸಣ್ಣ ನೀರಾವರಿ ಇಲಾಖೆಯ ವಿ. ರೇವಣಸಿದ್ಧಪ್ಪ ಎಂಬುವರು ಮುಖ್ಯಮಂತ್ರಿ ವಿರುದ್ಧ ಮಾರ್ಚ್‌ 14ರಂದು ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿಗೌಡ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪ ಆರೋಪ ಸಂಬಂಧ ದೂರು ನೀಡಿದ್ದರು.

ಕಿದ್ವಾಯಿ ಸಂಸ್ಥೆ ನಿರ್ದೇಶಕರಾಗಿದ್ದ ಎಂ. ವಿಜಯಕುಮಾರ ವಿರುದ್ಧ ತನಿಖೆ ಬಾಕಿ ಇರುವಾಗಲೇ ಸ್ವಯಂ ನಿವೃತ್ತಿಗೆ ಕಾನೂನು ಬಾಹಿರ ಅನುಮತಿ ನೀಡಲಾಗಿದೆ ಎಂದು ಆರೋಪಿಸಿ ಶರಣ ಪ್ರಕಾಶ ಪಾಟೀಲರ ವಿರುದ್ಧ ಎನ್. ವಿನಯಕುಮಾರ್ ಎಂಬುವರು ಪ್ರಕರಣ ದಾಖಲಿಸಿದ್ದರು.

ಉಳಿದಂತೆ ಮುಕ್ತಾಯಗೊಂಡಿರುವ ಬಹುತೇಕ ಪ್ರಕರಣಗಳು ಐಎಎಸ್‌ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳು. ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿವಿಧ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ನಗರ ಪೊಲೀಸ್ ಆಯುಕ್ತ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ವಿರುದ್ಧ ದಾಖಲಾಗಿದ್ದ ಪ್ರಕರಣಗಳು ಎಂದು ಮಾಹಿತಿ ಹಕ್ಕಿನಡಿ ಸಲ್ಲಿಸಿದ ಅರ್ಜಿಗೆ ವಿವರ ಕೊಡಲಾಗಿದೆ.

**

ಲೋಕಾಯುಕ್ತಕ್ಕೆ ಬರುವ ದೂರುಗಳನ್ನು ಮೂರು ರೀತಿಯಲ್ಲಿ ತನಿಖೆ ನಡೆಸಲಾಗುತ್ತದೆ. ಆರೋಪದಲ್ಲಿ ತಿರುಳಿಲ್ಲದಿದ್ದರೆ ಮುಕ್ತಾಯಗೊಳಿಸಲಾಗುವುದು.

-ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.