ADVERTISEMENT

2ನೇ ವಿಮಾನ ನಿಲ್ದಾಣಕ್ಕೆ ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 16:01 IST
Last Updated 8 ಏಪ್ರಿಲ್ 2025, 16:01 IST
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ತಂಡವು ಕನಕಪುರ ರಸ್ತೆ ಸಮೀಪ ಗುರುತಿಸಲಾದ ಸ್ಥಳದ ಪರಿಶೀಲನೆ ನಡೆಸಿತು
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ತಂಡವು ಕನಕಪುರ ರಸ್ತೆ ಸಮೀಪ ಗುರುತಿಸಲಾದ ಸ್ಥಳದ ಪರಿಶೀಲನೆ ನಡೆಸಿತು   

ಬೆಂಗಳೂರು: ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆಂದು ಗುರುತಿಸಲಾದ ಎರಡು ಸ್ಥಳಗಳಿಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ತಂಡವು ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿತು.

ಎರಡನೇ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರವು ಮೂರು ಸ್ಥಳಗಳನ್ನು ಗುರುತು ಮಾಡಿ, ಎಎಐಗೆ ಪ್ರಸ್ತಾವ ಸಲ್ಲಿಸಿತ್ತು. 

ಎಎಐನ ಪ್ರಧಾನ ವ್ಯವಸ್ಥಾಪಕ ವಿಕ್ರಮ್‌ ಸಿಂಗ್‌, ಜಂಟಿ ಪ್ರಧಾನ ವ್ಯವಸ್ಥಾಪಕ ಕೆ.ಶ್ರೀನಿವಾಸರಾವ್ ಸೇರಿ ಆರು ಜನರ ತಂಡವು ಕನಕಪುರ ರಸ್ತೆ ಸಮೀಪ ಇರುವ ಚೂಡಹಳ್ಳಿ–ಸೋಮನಹಳ್ಳಿ ಬಳಿ ಗುರುತಿಸಲಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜತೆಗೆ ಕರಿಯಾಳಕರೆನಹಳ್ಳಿ ಬಳಿ ಗುರುತಿಸಲಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ADVERTISEMENT

ರಾಜ್ಯ ಮೂಲಸೌಕರ್ಯ ಇಲಾಖೆ ಅಧಿಕಾರಿಗಳು ಈ ವೇಳೆ ಹಾಜರಿದ್ದು, ಈ ಸ್ಥಳಗಳಲ್ಲಿ ಲಭ್ಯವಿರುವ ಸವಲತ್ತುಗಳು ಮತ್ತು ನಗರಕ್ಕೆ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರ ಜತೆಗೆ ಎಎಐ ತಂಡವು ಚರ್ಚೆ ನಡೆಸಿತು.

ಬೆಂಗಳೂರು–ಮಂಗಳೂರು ಹೆದ್ದಾರಿಯಲ್ಲಿ ನೆಲಮಂಗಲ ಜಂಕ್ಷನ್‌ನಿಂದ ಹತ್ತು ಕಿ.ಮೀ.ದೂರದಲ್ಲಿರುವ ಸೋಲದೇವನಹಳ್ಳಿ ಬಳಿಯ ಮಾರಗೊಂಡನಹಳ್ಳಿಯಲ್ಲಿ ಮೂರನೇ ಸ್ಥಳವನ್ನು ಗುರುತಿಸಲಾಗಿದೆ. ಎಎಐ ತಂಡವು ಅಲ್ಲಿಗೆ ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.