ಬೆಂಗಳೂರು: ಕನಿಷ್ಠ ಮೂರು ದಾಖಲಾತಿಗಳು ಲಭ್ಯವಿದ್ದರೂ ರೈತರಿಗೆ ಮಂಜೂರಾಗಿರುವ ಜಮೀನುಗಳ ಪೋಡಿ ಕಾರ್ಯ ಪೂರ್ಣಗೊಳಿಸಬಹುದು.
ಈ ಕುರಿತು ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು, ಇನ್ನು ಮುಂದೆ ಕನಿಷ್ಠ ದಾಖಲೆಗಳ ಆಧಾರದಲ್ಲಿ ಆಯಾ ತಹಶೀಲ್ದಾರ್ ಅವರು, ದಾಖಲೆಗಳ ನೈಜತೆಯನ್ನು ಪರಿಶೀಲಿಸಿ, ಪೋಡಿ ಮಾಡಲು ಆದೇಶಿಸಬಹುದಾಗಿದೆ.
ಮೊದಲು ಯಾವುದೇ ಒಂದು ದಾಖಲಾತಿ ಲಭ್ಯವಿಲ್ಲದಿದ್ದರೂ ಆ ಕಡತವನ್ನು ‘ಗೈರುವಿಲೇ ಸಮಿತಿ’ ಮುಂದೆ ಮಂಡಿಸಬೇಕಿತ್ತು. ಈ ಪ್ರಕ್ರಿಯೆ ಸುದೀರ್ಘ ಅವಧಿ ತೆಗೆದುಕೊಳ್ಳುತ್ತಿದ್ದ ಕಾರಣ ಪೋಡಿ ಕಾರ್ಯಗಳು ಸಾಕಷ್ಟು ವಿಳಂಬವಾಗುತ್ತಿದ್ದವು. ಪೋಡಿ ದುರಸ್ತಿಗಾಗಿ ನಮೂನೆ 1ರಿಂದ 5 ಮತ್ತು 6ರಿಂದ 10ರವರೆಗಿನ ಭೂ ದಾಖಲೆಗಳನ್ನು ಹಾಜರುಪಡಿಸುವುದು ಕಡ್ಡಾಯವಾಗಿತ್ತು. ದಶಕಗಳ ಹಿಂದೆಯೇ ಸರ್ಕಾರ ಬಡ ರೈತರಿಗೆ ಜಮೀನು ಮಂಜೂರು ಮಾಡಿದ್ದರೂ, ಸಮರ್ಪಕ ದಾಖಲೆಗಳ ಕೊರತೆಯ ಕಾರಣ ಜಮೀನು ಪೋಡಿ ಆಗಿರಲಿಲ್ಲ. ರೈತರು ಇಂದಿಗೂ ಸರ್ಕಾರಿ ಕಚೇರಿಗಳಿಗೆ ಸುತ್ತುತ್ತಿದ್ದಾರೆ.
ಈಗ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದ್ದು, ಒಂದು ಸರ್ವೆ ನಂಬರಿನ ಎಲ್ಲ ಮಂಜೂರಾತಿಯ ನಮೂನೆ 1ರಿಂದ 5 ಮತ್ತು ಪೋಡಿ ಕೆಲಸವನ್ನು ಏಕಕಾಲದಲ್ಲಿ ನಿರ್ವಹಿಸಲಾಗುತ್ತದೆ. ಎಲ್ಲ ದಾಖಲೆಗಳನ್ನೂ ಸ್ಕ್ಯಾನ್ ಮಾಡಿ, ಅಳವಡಿಸಲಾಗುತ್ತಿದೆ. ಒಂದು ಸರ್ವೆ ನಂಬರಿಗೆ ಒಮ್ಮೆ ದಾಖಲೆಗಳನ್ನು ಅಳವಡಿಸಿದ ನಂತರ ಅವು ಕಾಯಂ ಆಗಿ ಲಭ್ಯವಾಗುತ್ತವೆ.
ದರಖಾಸ್ತು ಪೋಡಿ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ತಡೆಯುವ ಸಲುವಾಗಿ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಶಿರಸ್ತೇದಾರರು ಹಾಗೂ ತಹಶೀಲ್ದಾರರು ನಮೂನೆ 1ರಿಂದ 5ರ ಮಾಹಿತಿಯನ್ನು ಭರ್ತಿ ಮಾಡಿ, ಡಿಜಿಟಲ್ ಸಹಿ ಮಾಡುವಂತಹ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಲಾಗುತ್ತಿದೆ.
ದಾರಿಗೆ ಪ್ರತ್ಯೇಕ ಅಸ್ತಿತ್ವ: ಮಂಜೂರಾತಿ ನಕ್ಷೆಯಲ್ಲಿ ಗುರುತಿಸಿರುವ ಹೊಲದ ದಾರಿಯನ್ನು ದುರಸ್ತಿ ದಾಖಲೆಯಲ್ಲಿ ಪ್ರತ್ಯೇಕ ದಾರಿ ಎಂದೇ ಗುರುತಿಸಿ, ಕಾಯಂಗೊಳಿಸಬೇಕು. ಆ ಜಾಗವನ್ನು ಯಾರ ವಿಸ್ತೀರ್ಣದಲ್ಲೂ ಸೇರಿಸಬಾರದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.