ADVERTISEMENT

ಒಲಿಯದ ತಂದೆ ಕ್ಷೇತ್ರ, ಒಲಿದ ಸಿ.ಎಂ ಸ್ಥಾನ

ಬಸವರಾಜ ಹವಾಲ್ದಾರ
Published 29 ಜುಲೈ 2021, 7:00 IST
Last Updated 29 ಜುಲೈ 2021, 7:00 IST
ಬಸವರಾಜ ಬೊಮ್ಮಾಯಿ ಅವರ ವಿವಾಹಕ್ಕೆ ಬಂದು ಶುಭ ಹಾರೈಸಿದ್ದ ವರನಟ ಡಾ.ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ ದಂಪತಿ.
ಬಸವರಾಜ ಬೊಮ್ಮಾಯಿ ಅವರ ವಿವಾಹಕ್ಕೆ ಬಂದು ಶುಭ ಹಾರೈಸಿದ್ದ ವರನಟ ಡಾ.ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ ದಂಪತಿ.   

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ ಅವರು ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ, ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರಿಗೆ ಒಲಿಯಲಿಲ್ಲ. ಆದರೆ, ಎಸ್‌.ಆರ್‌. ಬೊಮ್ಮಾಯಿ ಅವರು ಏರಿದ್ದ ಮುಖ್ಯಮಂತ್ರಿ ಸ್ಥಾನ ಅವರಿಗೆ ಒಲಿದಿದೆ.

1985ರಲ್ಲಿ ನಡೆದ ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಸ್‌.ಆರ್. ಬೊಮ್ಮಾಯಿ ಅವರು, 1988ರಲ್ಲಿ ಮುಖ್ಯಮಂತ್ರಿಯಾಗಿದ್ದರು. 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಂದೆ ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಗ್ರಾಮೀಣ (ಈಗಿನ ಹುಬ್ಬಳ್ಳಿ ಸೆಂಟ್ರಲ್‌) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ರಾಜಕೀಯ ಜೀವನ ಕಾಲಿಟ್ಟರು. ಆದರೆ, ಗೆಲುವು ದಕ್ಕಲಿಲ್ಲ.

1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಎದುರಾಳಿಯಾಗಿದ್ದು, ಮಾಜಿ ಸಚಿವರಾಗಿರುವ ಜಗದೀಶ ಶೆಟ್ಟರ್‌. ನಂತರ ಅವರು ಧಾರವಾಡ ಜಿಲ್ಲಾ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಮೂಲಕ ವಿಧಾನಸೌಧದ ಮೆಟ್ಟಿಲೇರಿದರು. ನಂತರ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ವಲಸೆ ಹೋದರು.

ADVERTISEMENT

ಹುಬ್ಬಳ್ಳಿಗೆ ಮೂರನೇ ಬಾರಿಗೆ ಒಲಿದ ಮುಖ್ಯಮಂತ್ರಿ ಹುದ್ದೆ: ಹುಬ್ಬಳ್ಳಿಗೆ ಮೂರನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಒಲಿದಿದೆ.

1988ರಲ್ಲಿ ಎಸ್‌.ಆರ್‌. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದರು. ನಂತರ 2012ರಲ್ಲಿ ಜಗದೀಶ ಶೆಟ್ಟರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಒಲಿದಿತ್ತು. ಇಬ್ಬರೂ ಹುಬ್ಬಳ್ಳಿ ಕ್ಷೇತ್ರ ಪ್ರತಿನಿಧಿಸುವಾಗಲೇ ಮುಖ್ಯಮಂತ್ರಿಯಾಗಿದ್ದರು ಎನ್ನುವುದು ವಿಶೇಷ. ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದರೂ, ಹುಬ್ಬಳ್ಳಿಯಲ್ಲಿ ಇಂದಿಗೂ ಮನೆಯಿದೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಬಂದಾಗಲೂ ಅವರು ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.