ADVERTISEMENT

4 ಎಕರೆ ಖರೀದಿಸಿ 20 ಎಕರೆಗೆ ಬೇಲಿ!

ರಾಜಕಾರಣಿಗಳಿಂದ ಜಮೀನು ಒತ್ತುವರಿಗೆ ಹೈಕೋರ್ಟ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 20:10 IST
Last Updated 13 ಜನವರಿ 2020, 20:10 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಗೋಮಾಳ, ಸರ್ಕಾರಿ ಜಮೀನುಗಳನ್ನು ಉಳ್ಳವರಿಗೆ ಕೇಳಿದಂತೆ ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಸಜ್ಜಾಗಿರುವ ತಹಶೀಲ್ದಾರ್‌ಗಳು ಬೇಕಿದ್ದರೆ, ಕಬ್ಬನ್‌ ಪಾರ್ಕ್‌ ಹಾಗೂ ವಿಧಾನಸೌಧದದ ಸುತ್ತಮುತ್ತ ಎಲ್ಲಿಯಾದರೂ ಸರ್ಕಾರಿ ಜಾಗವಿದ್ದರೆ ಅದನ್ನೂ ಮಂಜೂರು ಮಾಡಿಬಿಡುತ್ತಾರೆ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಮುಟ್ಟುಗೋಲು ಹಾಕಿಕೊಂಡ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಈ ಕುರಿತಂತೆ ಕಂದಾಯ ಅಧಿಕಾರಿಗಳ ವಿರುದ್ಧ ಮೌಖಿಕವಾಗಿ ಆಕ್ರೋಶ ವ್ಯಕ್ತಪಡಿಸಿತು.

‘ಇಂದು ನ್ಯಾಯಾಂಗದ ಅಧಿಕಾರಿಗಳು, ವಕೀಲರೂ ಕೃಷಿ ಜಮೀನು ಖರೀದಿಸುತ್ತಿದ್ದಾರೆ.
ಇಂತಹವರು ನಾಲ್ಕು ಎಕರೆ ಖರೀದಿಸಿದರೆ ಅದರ ಪಕ್ಕದ 20 ಎಕರೆ ಸರ್ಕಾರಿ ಜಮೀನು, ಗೋಮಾಳಗಳಿಗೂ ಬೇಲಿ ಹಾಕಿಕೊಂಡುಬಿಡುತ್ತಾರೆ.
ಕೃಷಿಕರಲ್ಲದವರು ಕೃಷಿ ಜಮೀನು ಖರೀದಿಸಲು ಎಲ್ಲಿದೆ ಅವಕಾಶ. ಇಂತಹ ಪ್ರಕರಣಗಳಲ್ಲಿ ಜನಪ್ರತಿನಿಧಿಗಳ ಪಾಲೇ ಹೆಚ್ಚಿದೆ’ ಎಂದು ನ್ಯಾಯಪೀಠ ಕಿಡಿ ಕಾರಿತು.

ADVERTISEMENT

‘ತಹಶೀಲ್ದಾರ್ ಕಚೇರಿಗಳಲ್ಲಿ ಆರ್‌ಟಿಸಿ, ಮ್ಯುಟೇಶನ್‌, ಕ್ರಯಪತ್ರ, ಖಾತೆ ಮಾಡಿಕೊಡಲು ಕಾನೂನುಬದ್ಧವಾಗಿ ಮತ್ತು ಕಾನೂನು ಬಾಹಿರವಾಗಿ ದುಡ್ಡು ಪಡೆಯಲಾಗುತ್ತಿದೆ. ಈ ತಹಶೀಲ್ದಾರ್‌ಗಳು, ಉಪವಿಭಾಗಾಧಿಕಾರಿಗಳು ಬಡವರು ಮತ್ತು ರೈತರ ಸುಲಿಗೆ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿತು.

‘ಇನ್ನು ಮುಂದೆ ತಹಶೀಲ್ದಾರ್, ಉಪವಿಭಾಗಾಧಿಕಾರಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ಕಾರಿ ಜಮೀನು ಮಂಜೂರು ಮಾಡುವ ಮುನ್ನ ದಾಖಲೆಗಳ ಕೂಲಂಕಷ ಪರಿಶೀಲನೆ ನಡೆಸಬೇಕು. ಈ ವಿಚಾರದಲ್ಲಿ ವಿಸ್ತೃತ ಆದೇಶ ಹೊರಡಿಸಲಾಗುವುದು’ ಎಂದು ನ್ಯಾಯಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.