ADVERTISEMENT

ಅಲೆಮಾರಿಗಳಿಗೆ ಶೇ 4 ಒಳಮೀಸಲಾತಿ ಕಲ್ಪಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 21:29 IST
Last Updated 3 ಫೆಬ್ರುವರಿ 2025, 21:29 IST
ಜಿ. ಪಲ್ಲವಿ
ಜಿ. ಪಲ್ಲವಿ   

ಬೆಂಗಳೂರು: ರಾಜ್ಯ ಸರ್ಕಾರ ಗುರುತಿಸಿದ 51 ಅಲೆಮಾರಿ, ವಿಮುಕ್ತ ಬುಡಕಟ್ಟು ಮತ್ತು ಸೂಕ್ಷ್ಮ ಸಮುದಾಯಗಳಿಗೆ ಶೇ 4ರಷ್ಟು ಒಳಮೀಸಲಾತಿ ಕಲ್ಪಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮ ಮನವಿ ಮಾಡಿದೆ.

ಒಳಮೀಸಲಾತಿ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಅವರನ್ನು ಭೇಟಿ ಮಾಡಿದ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಅಲೆಮಾರಿಗಳಿಗೆ ಇರುವರೆಗೂ ಸೂಕ್ತ ಮೀಸಲಾತಿ ಸಿಕ್ಕಿಲ್ಲ. ಒಳ ಮೀಸಲಾತಿಯಲ್ಲಿ ಪ್ರಾತಿನಿಧ್ಯ ದೊರೆತರೆ ಭವಿಷ್ಯದಲ್ಲಿ ಅವರ ಜೀವನ ಹಸನಾಗಬಹುದು ಎಂದು ಹೇಳಿದ್ದಾರೆ.

ಬುಡ್ಗಜಂಗಮ, ಹಂದಿಜೋಗಿ, ಶಿಳ್ಳೆಕ್ಯಾತ, ಸುಡುಗಾಡುಸಿದ್ದ, ಚೆನ್ನದಾಸರ್‌, ಹೊಲೆಯದಾಸರ್, ಮಾಲದಾಸರಿ ಮತ್ತಿತರ ಅಲೆಮಾರಿ ಜನರು ನೆಲೆ ಮತ್ತು ನೆಲದ ಒಡೆತನವಿಲ್ಲದೇ, ಒಂದೆಡೆ ನೆಲೆ ನಿಲ್ಲಲಾಗದ ಸ್ಥಿತಿಯಲ್ಲಿದ್ದಾರೆ. ನಿರ್ದಿಷ್ಟ ವೃತ್ತಿ ಇಲ್ಲದೇ ಊರೂರು ಅಲೆದು ಬದುಕು ಸಾಗಿಸುತ್ತಿದ್ದಾರೆ. ಭಿಕ್ಷಾಟನೆ, ತೊಗಲಗೊಂಬೆ, ಹಚ್ಚೆ ಹಾಕುವುದು, ತತ್ವಪದ ಹಾಡುವುದು, ಜೀತ, ಕೂಲಿ, ಪಶುಪಾಲನೆ, ಹಂದಿ ಸಾಕಣೆ, ಬುಟ್ಟಿ ಹೆಣೆಯುವುದು, ಕಸಬರಿಗೆ ಕಟ್ಟುವುದು, ಕೊರವಂಜಿ, ಕಣಿ ಹೇಳುವುದು, ವೇಷಧಾರಿಗಳು, ಶಹನಾಯಿ ನುಡಿಸುವುದು, ಚರ್ಮಾಧಾರಿತ ಗುಡಿಕೈಗಾರಿಕೆ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. 2011ರ ಜನಗಣತಿಯ ಪ್ರಕಾರ ಒಟ್ಟು ಅಲೆಮಾರಿಗಳ ಜನಸಂಖ್ಯೆಯಲ್ಲಿ ಶೇ 66.67 ಅನಕ್ಷರಸ್ಥರಿದ್ದಾರೆ. ಜನಗಣತಿಯ ಅಂಕಿ,ಅಂಶಗಳಲ್ಲೂ ವ್ಯತ್ಯಾಸವಿದೆ ಎಂದು ವಿವರಿಸಿದ್ದಾರೆ

ADVERTISEMENT

101 ಸಮುದಾಯಗಳ ಅಂತರ್‌ ಹಿಂದುಳಿದಿರುವಿಕೆ, ಸಮರ್ಪಕ ಪ್ರಾತಿನಿಧ್ಯದ ಕೊರತೆ ಹಾಗೂ ಪರಿಶೀಲನಾರ್ಹ ದತ್ತಾಂಶಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಬೇಕು. 70 ವರ್ಷಗಳಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮರ್ಪಕ ಪ್ರಾತಿನಿಧ್ಯದ ದೊರಕದ ಸಮುದಾಯಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಬೇಕು. ಒಳಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗಕಷ್ಟೇ ಸೀಮಿತಗೊಳಿಸದೆ ರಾಜಕೀಯ, ಸಹಕಾರ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಗಳಿಗೂ ವಿಸ್ತರಿಸಬೇಕು. ಸೀಟು ಹಂಚಿಕೆ, ಬಡ್ತಿ ರೋಸ್ಟರ್‌ಗಳಿಗೂ ಅನ್ವಯಿಸಬೇಕು. ಕುಲಶಾಸ್ತ್ರೀಯ ಮತ್ತು ಮಾನವ ಶಾಸ್ತ್ರೀಯ ಅಧ್ಯಯನಗಳನ್ನು ಆಧರಿಸಿ ಕುಲಶಾಸ್ತ್ರೀಯ ಸಾಮ್ಯತೆ ಇರುವ ಸಮುದಾಯಗಳನ್ನು ಒಂದೇ ಗುಂಪಿನಲ್ಲಿ ಸೇರಿಸಲು ಶಿಫಾರಸು ಮಾಡಬೇಕು ಎಂದು ಕೋರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.