ADVERTISEMENT

ಬಿಸಿಯೂಟದಲ್ಲಿ ಹಲ್ಲಿ: 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಆಗಲೂರು, ಚಿಕ್ಕಮಾಗಿ ಸರ್ಕಾರಿ ಶಾಲೆಗಳಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 20:35 IST
Last Updated 20 ಡಿಸೆಂಬರ್ 2018, 20:35 IST
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು   

ಬಳ್ಳಾರಿ/ಬಾಗಲಕೋಟೆ: ಬಳ್ಳಾರಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಗುರುವಾರ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ಮಕ್ಕಳುಅಸ್ವಸ್ಥರಾಗಿದ್ದಾರೆ.

ಸಿರುಗುಪ್ಪ ತಾಲ್ಲೂಕಿನ ಆಗಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 100 ಮಕ್ಕಳು ಹಾಗೂ ಹುನಗುಂದ ತಾಲ್ಲೂಕಿನ ಚಿಕ್ಕಮಾಗಿ ಸರ್ಕಾರಿ ಶಾಲೆಯ 12 ಮಕ್ಕಳು ಅಸ್ವಸ್ಥರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕಮಾಗಿ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಸೇವನೆ ವೇಳೆ ಆರನೇ ತರಗತಿಯ ವಿದ್ಯಾರ್ಥಿ ಹನುಮಂತ ಚಲವಾದಿ ತಟ್ಟೆಯಲ್ಲಿ ಹಲ್ಲಿ ಕಾಣಿಸಿದೆ. ಶಿಕ್ಷಕರಿಗೆ ಹೇಳಲು ಹಿಂಜರಿದ ಹನುಮಂತ ಸ್ನೇಹಿತರಿಗೆ ತಿಳಿಸಿದ್ದಾನೆ.

ADVERTISEMENT

‘ವಿಷಯ ಗೊತ್ತಾಗುವ ಹೊತ್ತಿಗೆ 10ಕ್ಕೂ ಹೆಚ್ಚು ಮಕ್ಕಳ ಅರ್ಧ ಊಟ ಮುಗಿದಿತ್ತು. ಉಳಿದವರು ಒಂದೆರಡು ತುತ್ತು ತಿಂದಿದ್ದರು. ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ ನಂತರ ಗ್ರಾಮಸ್ಥರು ಅವರನ್ನು ಸಮೀಪದ ಕಮತಗಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು’ ಎಂದು ಶಾಲೆಯ ಮುಖ್ಯ ಶಿಕ್ಷಕ ಗುರುನಾಥ ಗೌಡರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಯ ಎಲ್ಲ ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಿಸಿ ನಿಗಾ ಇಡಲಾಗಿದೆ’ ಎಂದು ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ತಿಳಿಸಿದ್ದಾರೆ.

ಆಗಲೂರು ಶಾಲೆ: ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರುವ ವಿಷಯ ತಿಳಿದು ಆಗಲೂರು ಶಾಲೆಯ ಮಕ್ಕಳು ಗಾಬರಿಯಾಗಿ ವಾಂತಿ ಮಾಡಿಕೊಂಡರು. ಶಿಕ್ಷಕರು, ಪಾಲಕರು ಮಕ್ಕಳನ್ನು ಸಮೀಪದಲ್ಲಿರುವ ತಾಲ್ಲೂಕಿನ ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಚಿಕಿತ್ಸೆ ಬಳಿಕ ಹಲವು ವಿದ್ಯಾರ್ಥಿಗಳುಮನೆಗೆ ತೆರಳಿದ್ದು, ತೀವ್ರ ಅಸ್ವಸ್ಥಗೊಂಡಿರುವ 20 ಮಂದಿಯನ್ನು ಬಳ್ಳಾರಿಯ ವಿಮ್ಸ್‌ಗೆ ಸೇರಿಸಲಾಗಿದೆ.

**

ಡಿಎಚ್‌ಒಗೆ ಘೇರಾವ್..

‘ಕಮತಗಿ ಆಸ್ಪತ್ರೆಯಲ್ಲಿ ಕಾಯಂ ವೈದ್ಯರು ಇಲ್ಲ. ತುರ್ತು ಸಂದರ್ಭದಲ್ಲಿ ಈಗಿರುವ ವೈದ್ಯರು ಸಿಗುವುದಿಲ್ಲ. ನಮಗೆ ತೊಂದರೆಯಾಗಿದೆ’ ಎಂದು ಆರೋಪಿಸಿ ಗ್ರಾಮಸ್ಥರು ಜಿಲ್ಲಾ ಆರೋಗ್ಯಾಧಿಕಾರಿಗೆ ಘೇರಾವ್ ಹಾಕಿದರು.

ಇನ್ನೊಂದು ವಾರದೊಳಗೆ ಕಾಯಂ ವೈದ್ಯರ ನೇಮಕ ಮಾಡುವುದಾಗಿ ಡಿಎಚ್ಒ ಭರವಸೆ ನೀಡಿ ಗ್ರಾಮಸ್ಥರನ್ನು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.