ADVERTISEMENT

ಶೇ 40ರಷ್ಟು ಕಮಿಷನ್: ನಮ್ಮ ಕಾಲದಲ್ಲಿ ಹಗರಣವಾಗಿದ್ದರೆ ತನಿಖೆ ಮಾಡಿ –ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 11:21 IST
Last Updated 26 ಆಗಸ್ಟ್ 2022, 11:21 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ನಾನು ಸತ್ಯಹರಿಶ್ಚಂದ್ರ ಅಥವಾ ಆತನ ವಂಶದವ ಎಂದು ಹೇಳಿಲ್ಲ. ಸಿದ್ದರಾಮಯ್ಯ ಎಂದೇ ಹೇಳಿಕೊಂಡಿದ್ದೇನೆ. ನಮ್ಮ ಕಾಲದಲ್ಲಿ ಹಗರಣ ನಡೆದಿದ್ದರೆ ಅದನ್ನೂ ಸೇರಿಸಿ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲಿ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

ಇಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ‘ಗುತ್ತಿಗೆದಾರರ ಸಂಘದವರು ಶೇ 40ರಷ್ಟು ಕಮಿಷನ್ ಆರೋಪ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕಿರುವ ಸಮಸ್ಯೆ ಏನು’ ಎಂದು ಪ್ರಶ್ನಿಸಿದರು.

‘ನಾವು ಪ್ರಾಮಾಣಿಕರು, ಯಾವ ಸಚಿವರೂ ನಯಾಪೈಸೆ ಲಂಚ ಪಡೆದಿಲ್ಲ ಎನ್ನುವ ಬಿಜೆಪಿ ನಾಯಕರು, ಒಂದು ರೂಪಾಯಿ ಲಂಚವನ್ನೂ ಮುಟ್ಟಿಲ್ಲ ಎನ್ನುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮ್ಮ ವಿರುದ್ಧದ ಆರೋಪ ಸುಳ್ಳು ಎಂದು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದಿರುವ ಮುನಿರತ್ನ, ಲಂಚ ಎಂದರೆ ಏನೆಂಬುದೇ ಗೊತ್ತಿಲ್ಲ ಎನ್ನುವ ಸುಧಾಕರ್‌ ನ್ಯಾಯಾಂಗ ತನಿಖೆಗೆ ಒಪ್ಪುತ್ತಿಲ್ಲವೇಕೆ?’ ಎಂದು ವ್ಯಂಗ್ಯವಾಡಿ ಕೇಳಿದರು.

ADVERTISEMENT

‘ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದನ್ನು ರಾಜ್ಯದ ಜನ ಮಾತನಾಡುತ್ತಿದ್ದಾರೆ. ವಿಧಾನಸೌಧದ ಗೋಡೆಗಳು ಹೇಳುತ್ತಿವೆ. ಅಧಿಕಾರಿಗಳು, ಗುತ್ತಿಗೆದಾರರ ಸಂಘದವರು ಹೇಳುತ್ತಿದ್ದಾರೆ. ಕಮಿಷನ್‌ ಬೇಡಿಕೆಯಿಂದ ಬೇಸತ್ತು ಗುತ್ತಿಗೆದಾರರ ಸಂಘದವರು 2ನೇ ಬಾರಿಗೆ ಮಾಧ್ಯಮದ ಮುಂದೆ ಬಂದು ಸಮಸ್ಯೆ ಹೇಳಿಕೊಂಡಿದ್ದಾರೆ. ಪತ್ರ ಬರೆದು ವರ್ಷವೇ ಕಳೆದಿದ್ದರೂ ಪ್ರಧಾನಿ ನರೇಂದ್ರ ಮೋದಿ ಅಥವಾ ರಾಜ್ಯ ಸರ್ಕಾರ ಕ್ರಮವನ್ನೇ ಕೈಗೊಂಡಿಲ್ಲ’ ಎಂದು ದೂರಿದರು.

‘ಬೆಂಗಳೂರು ಮಹಾನಗರ ಪಾಲಿಕೆಯ ಕಾಮಗಾರಿಗಳಲ್ಲಿ ಕಮಿಷನ್‌ ಪ್ರಮಾಣ ಶೇ 40ರಿಂದ ಶೇ 50ಕ್ಕೆ ಹೆಚ್ಚಾಗಿದೆ. ಕೆಲವೆಡೆ ಶೇ 100ರಷ್ಟು ಕಮಿಷನ್‌ ತೆಗೆದುಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿ, ಎಲ್ಲ ಸಚಿವರೂ ತೆಗೆದುಕೊಳ್ಳುತ್ತಿದ್ದಾರೆ. ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಒತ್ತಡ ಹಾಕಿ ಕಮಿಷನ್‌ ಪಡೆಯುತ್ತಾರೆ ಎಂದು ಗುತ್ತಿಗೆದಾರರು ಹೇಳಿದ್ದಾರೆ. ಸಾಮಾನ್ಯವಾಗಿ, ತಮಗೆ ಕಿರುಕುಳ ನೀಡುತ್ತಾರೆ, ಕಾಮಗಾರಿಗಳನ್ನು ನೀಡುವುದಿಲ್ಲ ಎಂದು ಗುತ್ತಿಗೆದಾರರು ಹೆದರುತ್ತಾರೆ. ಆದರೆ ಈಗ ಸರ್ಕಾರದ ಕಿರುಕುಳ ತಡೆಯಲಾಗದೆ ಹೊರಬಂದು ಅಸಮಾಧಾನ ತೋಡಿಕೊಂಡಿದ್ದಾರೆ. ಇಷ್ಟಾದ ಮೇಲೂ ಮುಖ್ಯಮಂತ್ರಿ ದಾಖಲೆ ಕೇಳುತ್ತಿದ್ದಾರೆ’ ಎಂದು ಟೀಕಿಸಿದರು.

‘ನಾನು ಮುಖ್ಯಮಂತ್ರಿ ಆಗಿದ್ದಾಗ 5 ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೆ. ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿತ್ತು. ಇವರೂ ಸಿಬಿಐಗೆ ಕೊಟ್ಟು ತನಿಖೆ ನಡೆಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಂಭೀರ ಆರೋಪಗಳು ಬಂದಾಗ ನೆಪ ಹೇಳುವ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಭಂಡತನ ಸರಿಯಲ್ಲ’ ಎಂದರು.

‘ನನ್ನ ಅಧಿಕಾರದ ಅವಧಿಯಲ್ಲಿ ಎನ್‌ಒಸಿಗೆ ಯಾರಾದರೂ ನನಗೆ ಒಂದು ಪೈಸೆ ಲಂಚ ನೀಡಿರುವ ಉದಾಹರಣೆ ಇದ್ದರೆ ತೋರಿಸಲಿ’ ಎಂದು ಸವಾಲು ಹಾಕಿದರು.

‘ತನಿಖೆಗೆ ವಹಿಸಿದರೆ ಕೊಡುತ್ತೇವೆ ಎಂದಿದ್ದಾರೆ’

‘ಶೇ 40ರಷ್ಟು ಕಮಿಷನ್ ವಿಚಾರವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ ನಮ್ಮ ಬಳಿಯಿರುವ ಎಲ್ಲಾ ದಾಖಲೆಗಳನ್ನೂ ನೀಡುತ್ತೇವೆ. ಒಂದು ವೇಳೆ ನಾವು ಮಾಡಿರುವ ಆರೋಪ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಯಾವುದೇ ರೀತಿಯ ಶಿಕ್ಷೆ ಎದುರಿಸಲು ಸಿದ್ಧರಿದ್ದೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನನ್ನ ಬಳಿ ಹೇಳಿದ್ದಾರೆ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.