ಬೆಂಗಳೂರು: ರಾಜ್ಯ ಹೈಕೋರ್ಟ್‌ನ ಕ್ರಿಮಿನಲ್ ಮೊಕದ್ದಮೆಗಳಲ್ಲೇ ಅತ್ಯಂತ ಹಳೆಯದಾದ 44 ವರ್ಷಗಳ ಹಿಂದಿನ ಪ್ರಕರಣವೊಂದನ್ನು ವಿಲೇವಾರಿ ಮಾಡಲಾಗಿದ್ದು, ಈ ಸಂಬಂಧ ಬೆಂಗಳೂರಿನ 68 ವರ್ಷದ ವ್ಯಕ್ತಿಯೊಬ್ಬರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲಾಗಿದೆ.
ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಮುತ್ಯಾಲ ನಗರದ ನಿವಾಸಿಯಾದ ಚಂದ್ರ ಅಲಿಯಾಸ್ ಚಂದ್ರಶೇಖರ ಭಟ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರ ಚಂದ್ರ ವಿರುದ್ಧದ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಯನ್ನು ರದ್ದುಗೊಳಿಸಿ ಆದೇಶಿಸಿದೆ.
‘ಉಡುಪಿ ಪೊಲೀಸ್ ಠಾಣೆಯಲ್ಲಿ 1980ರಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವೊಂದರಲ್ಲಿ ಅರ್ಜಿದಾರ ಚಂದ್ರ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿತ್ತು. ಆದರೆ, ಅವರಿಗೆ ಪೊಲೀಸ್ ಠಾಣೆಯಿಂದ ಯಾವುದೇ ಸಮನ್ಸ್ ಅಥವಾ ನೋಟಿಸ್ ಬಂದಿರಲಿಲ್ಲ. ಅಷ್ಟಕ್ಕೂ ಪ್ರಕರಣದ ಬಗ್ಗೆ ಅವರಿಗೆ ಗೊತ್ತೇ ಇರಲಿಲ್ಲ. ಚಂದ್ರ ತಲೆತಪ್ಪಿಸಿಕೊಂಡಿದ್ದರು ಎಂಬ ಪೊಲೀಸರ ವಾದ ಸುಳ್ಳು ಮತ್ತು ಈ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ಈಗಾಗಲೇ ಖುಲಾಸೆಗೊಳಿಸಲಾಗಿದೆ’ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ನ್ಯಾಯಪೀಠ ಎತ್ತಿಹಿಡಿದಿದೆ.
‘ಪ್ರಕರಣದಲ್ಲಿ ಖುಲಾಸೆಗೊಂಡಿರುವ ಇನ್ನಿಬ್ಬರು ಆರೋಪಿಗಳ ವಿರುದ್ಧ ಯಾವ ಅಪರಾಧಿಕ ಕಲಂಗಳಡಿ ದೋಷಾರೋಪ ನಿಗದಿಪಡಿಲಾಗಿತ್ತೋ ಅಂತಹುದೇ ಆರೋಪಗಳನ್ನೂ ಚಂದ್ರ ಅವರ ವಿರುದ್ಧ ಹೊರಿಸಲಾಗಿದೆ. ಹೀಗಾಗಿ, ಅರ್ಜಿದಾರರನ್ನು ದೋಷಾರೋಪ ಪಟ್ಟಿಯಿಂದ ವಿಭಜಿಸಿ ಪುನಃ ವಿಚಾರಣೆಗೆ ಒಳಪಡಿಸುವುದರಲ್ಲಿ ಅರ್ಥವಿಲ್ಲ. ನ್ಯಾಯಾಂಗದ ಅಮೂಲ್ಯ ಸಮಯವನ್ನು ಉಳಿಸಬೇಕೆಂದರೆ ಇಂತಹ ಪ್ರಕರಣವನ್ನು ರದ್ದುಗೊಳಿಸುವುದೇ ಸೂಕ್ತ’ ಎಂದು ನ್ಯಾಯಪೀಠ ತಿಳಿಸಿದೆ.
ಚಂದ್ರ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 143, 147, 148, 447, 307, 326, 302 ಮತ್ತು 149ರ ಅಡಿಯಲ್ಲಿ ಪರಿಗಣನಾರ್ಹ ಅಪರಾಧಿಕ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತಂತೆ ಉಡುಪಿಯ ಎರಡನೇ ಹೆಚ್ಚುವರಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ವಿಚಾರಣೆಯನ್ನು ಮುಂದುವರಿಸಲಾಗಿತ್ತು. ಚಂದ್ರ ವಿರುದ್ಧ ಹೈಕೋರ್ಟ್ ವಕೀಲ ಕೆ.ರವಿಶಂಕರ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.