ADVERTISEMENT

5 ಕಂಪೆನಿಗಳ ಗಣಿ ಅಕ್ರಮ: ಸಿಬಿಐ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ಬೆಂಗಳೂರು: ರಾಜ್ಯದ ಐದು ಗಣಿ ಕಂಪೆನಿಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಶುಕ್ರವಾರ ಇಲ್ಲಿ ಒತ್ತಾಯಿಸಿದರು.

ತುಮಕೂರು ಜಿಲ್ಲೆಯ ದೀಪ್‌ಚಂದ್ ಕಿಷನ್‌ಲಾಲ್ ಮತ್ತು ಮಾತಾ ಮಿನರಲ್ಸ್, ಚಿತ್ರದುರ್ಗ ಜಿಲ್ಲೆಯ ಸೇಸಾ-ಗೋವಾ, ಬಳ್ಳಾರಿ ಜಿಲ್ಲೆಯ ರಾಮರಾವ್ ಪೋಳ್ ಮತ್ತು ಬೆಂಗಳೂರಿನ ಲತಾ ಮೈನಿಂಗ್ ಕಂಪೆನಿಗಳು ತೀವ್ರ ಸ್ವರೂಪದ ಅಕ್ರಮಗಳನ್ನು ಎಸಗಿವೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ದೀಪ್‌ಚಂದ್ ಕಂಪೆನಿಗೆ ನೀಡಿದ್ದ ಗಣಿಗಾರಿಕೆಯ ಅನುಮತಿ 1994ರ ಜುಲೈ 4ಕ್ಕೆ ಕೊನೆಗೊಂಡಿದೆ. ಆದರೂ 2007ರವರೆಗೆ ಅಕ್ರಮವಾಗಿ ಗಣಿಗಾರಿಕೆ ನಡೆಸುವ ಮೂಲಕ 14.51 ಲಕ್ಷ ಟನ್ ಅದಿರು ರಫ್ತು ಮಾಡಿದೆ ಎಂದು ಆರೋಪಿಸಿದರು.

ಈ ಕಂಪೆನಿಯ ಮಾಲೀಕರಾದ ಬಸಂತ್ ಪೊದ್ದಾರ್ ಒಟ್ಟು ಐದು ಗಣಿ ಕಂಪೆನಿಗಳಿಗೆ ಅನುಮತಿ ಪಡೆದಿದ್ದಾರೆ. ಮಿನರಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಅಕ್ರಮದಲ್ಲೂ ಭಾಗಿಯಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ನಡೆದ ಜಂಟಿ ಸಮೀಕ್ಷೆಯಲ್ಲಿ ಅಕ್ರಮಗಳು ಬಯಲಿಗೆ ಬಂದಿವೆ. ಇಷ್ಟಾದರೂ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ತನ್ನ ವರದಿಯಲ್ಲಿ ಈ ಅಂಶಗಳನ್ನು ಪ್ರಸ್ತಾಪಿಸದೆ ಇರುವುದು ಆಶ್ಚರ್ಯ ಉಂಟುಮಾಡಿದೆ ಎಂದರು.

ಮಾತಾ ಮಿನರಲ್ಸ್ ಕಂಪೆನಿ ತಾನು ಅನುಮತಿ ಪಡೆದಿದ್ದ ಪ್ರದೇಶಗಳನ್ನೂ ಮೀರಿ, ಹೆಚ್ಚಿನ ಭೂಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದೆ. ಈ ಮೂಲಕ ಒಂದು ಲಕ್ಷ ಟನ್ ಅದಿರು ಸಾಗಾಣಿಕೆ ಮಾಡಿದೆ. ಇದರಿಂದ ಆಗಿರುವ ನಷ್ಟವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ವಸೂಲಿ ಮಾಡಬೇಕು ಎಂದು ಜಂಟಿ ಸಮೀಕ್ಷಾ ತಂಡ ವರದಿಯಲ್ಲಿ ಪ್ರಸ್ತಾಪಿಸಿದೆ ಎಂದು ಅವರು ತಿಳಿಸಿದರು.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೆಸರಿನಲ್ಲಿ ರಾಮರಾವ್ ಪೋಳ್ ಕಂಪೆನಿಗೆ ಅನುಮತಿ ನೀಡಲಾಗಿದೆ. ಈ ಕಂಪೆನಿಯಲ್ಲಿ ಗಂಭೀರ ಸ್ವರೂಪದ ಅಕ್ರಮಗಳು ನಡೆದಿವೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.