ADVERTISEMENT

5 ವರ್ಷದಲ್ಲಿ 14 ಉಪಗ್ರಹ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ಬೆಂಗಳೂರು (ಪಿಟಿಐ): ಮುಂದಿನ ಐದು ವರ್ಷದೊಳಗೆ (2017ರ ವೇಳೆಗೆ) ಭಾರತ ಇನ್ನೂ 14 ಸಂಪರ್ಕ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯೋಜನೆ ರೂಪಿಸಿದೆ.

ಟ್ರಾನ್ಸ್‌ಪಾಂಡರ್ (ಗ್ರಾಹಕ ಪ್ರೇಷಕ)ಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ 12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಸಂಪರ್ಕ ಉಪಗ್ರಹಗಳ ಉಡಾವಣೆಗೆ ದೇಶ ಸಜ್ಜಾಗಿದೆ. ಸದ್ಯ ಇನ್ಸಾಟ್-ಜಿಸ್ಯಾಟ್ ಉಪಗ್ರಹದಿಂದ ಲಭ್ಯವಿರುವ 187 ಟ್ರಾನ್ಸ್‌ಪಾಂಡರ್‌ಗಳ ಸಾಮರ್ಥ್ಯ 14 ಉಪಗ್ರಹಗಳ ಉಡಾವಣೆಯ ನಂತರ 794ಕ್ಕೆ ಏರಲಿದೆ ಎಂದು ಬಾಹ್ಯಾಕಾಶ ಇಲಾಖೆ ಅಂದಾಜಿಸಿದೆ. 

 2012-2017ರ ಅವಧಿಯಲ್ಲಿ ಉದ್ದೇಶಿತ 14 ಉಪಗ್ರಹಗಳ ಉಡಾವಣೆಯ ನಂತರ ದೇಶದ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯಾಗುವ ನಿರೀಕ್ಷೆ ಇದೆ. ಅತ್ಯಧಿಕ ತರಂಗಾಂತರ ಸಾಮರ್ಥ್ಯದ ಎಸ್-ಬ್ಯಾಂಡ್ ಮತ್ತು ಜಿಯೊ ಇಮೇಜಿಂಗ್ ಉಪಗ್ರಹದಿಂದ ಮೊಬೈಲ್ ದೂರವಾಣಿ ಕ್ಷೇತ್ರದಲ್ಲಿ ಇನ್ನೂ ವ್ಯಾಪಕ ಬದಲಾವಣೆಯಾಗುವ ಸಾಧ್ಯತೆಗಳಿವೆ. ಟ್ರಾನ್ಸ್‌ಪಾಂಡರ್ ಸಾಮರ್ಥ್ಯ ಮತ್ತು ಸಂಖ್ಯೆ ಹೆಚ್ಚಳದಿಂದ ಹೊಸ ತಲೆಮಾರಿನ ಬ್ರಾಡ್‌ಬ್ಯಾಂಡ್ `ವಿಸ್ಯಾಟ್~ ಮತ್ತು `ಕೆಯು ಬ್ಯಾಂಡ್~ ಸೌಲಭ್ಯ ದೊರೆಯಲಿದೆ.

ರೇಡಿಯೋ ಸಂಜ್ಞೆಗಳನ್ನು ಗ್ರಹಿಸಿ ಸ್ವಯಂಚಾಲಿತವಾಗಿ ಬೇರೆ ಸಂಜ್ಞೆಗಳನ್ನಾಗಿ ಬಿತ್ತರಿಸುವ ಟ್ರಾನ್ಸ್‌ಪಾಂಡರ್‌ಗಳ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಅಂತರವನ್ನು ಉಪಗ್ರಹಗಳು ಸರಿದೂಗಿಸಲಿವೆ. ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಕ್ಷೇತ್ರದಲ್ಲಿಯ ಹೆಚ್ಚುತ್ತಿರುವ ಬೇಡಿಕೆಗಳನ್ನು ಇವು ಪೂರೈಸಲಿವೆ ಎಂದು ಬಾಹ್ಯಾಕಾಶ ಇಲಾಖೆ ತಿಳಿಸಿದೆ.

12ನೇ ಪಂಚವಾರ್ಷಿಕ ಯೋಜನೆಯಲ್ಲಿ ಒಟ್ಟು 16 ಪಿಎಸ್‌ಎಲ್‌ವಿ ಯೋಜನೆ, ಆರು ಜಿಎಸ್‌ಎಲ್‌ವಿ ಎಂಕೆ-2 ಯೋಜನೆ ಮತ್ತು ಎರಡು ಜಿಎಸ್‌ಎಲ್‌ವಿ ಎಂಕೆ-3 ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆ ನಡೆಸಲಾಗಿದೆ.

ಅಲ್ಲದೇ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೂ ಈ ಅವಧಿಯಲ್ಲಿ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಹೊಸ ಸಂಪರ್ಕ ಉಪಗ್ರಹ ನೀತಿಗಳನ್ನು ರೂಪಿಸಲು ನಿರ್ಧರಿಸಿದೆ ಎಂದು ಬಾಹ್ಯಾಕಾಶ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.