ADVERTISEMENT

51 ‘ಸಿ’ ದರ್ಜೆ ಗಣಿ ಗುತ್ತಿಗೆ ರದ್ದು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 19:59 IST
Last Updated 13 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಹೆಚ್ಚು ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಸುಪ್ರೀಂ­ಕೋರ್ಟ್‌ನ ಕೇಂದ್ರ ಉನ್ನ­ತಾಧಿಕಾರ ಸಮಿತಿಯು (ಸಿಇಸಿ) ‘ಸಿ’ ವರ್ಗದಡಿ ಗುರುತಿಸಿದ್ದ ರಾಜ್ಯದ 51 ಗಣಿ ಪ್ರದೇಶಗಳ ಗುತ್ತಿಗೆಗಳನ್ನು ರದ್ದು ಮಾಡಿ ರಾಜ್ಯ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.

ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿದ್ದ ಸಿಇಸಿ, 51 ಗಣಿಗಳನ್ನು ‘ಸಿ’ ವರ್ಗದಡಿ ಗುರುತಿಸಿತ್ತು. ಈ ಗಣಿಗಳ ಗುತ್ತಿಗೆಗಳನ್ನು ರದ್ದು ಮಾಡಬೇಕು ಎಂಬ ಸಿಇಸಿ ಶಿಫಾರಸನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿತ್ತು.

ಸಿಇಸಿ ‘ಸಿ’ ವರ್ಗದಡಿ ಗುರುತಿಸಿದ್ದ ಎಲ್ಲಾ ಗಣಿಗಳ ಗುತ್ತಿಗೆಯನ್ನೂ ರದ್ದು ಮಾಡಲಾಗಿದೆ. ಈ ಸಂಬಂಧ ಅಧಿಸೂ­ಚನೆ­ಯನ್ನೂ ಹೊರಡಿಸ­ಲಾಗಿದೆ. ಈಗ ಎಲ್ಲಾ ಗಣಿ ಗುತ್ತಿಗೆ ಪ್ರದೇಶಗಳು ಸರ್ಕಾರದ ವಶಕ್ಕೆ ಬಂದಿವೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಳ್ಳಾರಿಯ ಅಸೋಸಿಯೇಟೆಡ್‌ ಮೈನಿಂಗ್‌ ಕಂಪೆನಿ (ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಒಡೆತನದಲ್ಲಿತ್ತು), ಬಿ.­ಆರ್‌.­ಯೋಗೇಂದ್ರ­ನಾಥ್‌ ಸಿಂಗ್‌, ಅಂಬಿಕಾ ಘೋರ್ಪಡೆ, ಹೊತ್ತೂರು ಟ್ರೇಡರ್ಸ್‌, ವಿ.ಎಸ್‌.ಲಾಡ್‌ ಅಂಡ್‌ ಸನ್ಸ್‌ (ಶಾಸಕ ಅನಿಲ್‌ ಲಾಡ್‌ ಒಡೆತನದ ಕಂಪೆನಿ), ತುಮಕೂರಿನ ಲತಾ ಮಿನರಲ್ಸ್‌, ಕೆನರಾ ಮಿನರಲ್ಸ್‌, ಮಾತಾ ಮೈನಿಂಗ್‌ ಕಂಪೆನಿ (ಮಾಜಿ ಸಚಿವ ವಿ.ಸೋಮಣ್ಣ ಅವರ ಪುತ್ರರ ಪಾಲುದಾರಿಕೆಯ ಕಂಪೆನಿ) ಗುತ್ತಿಗೆ ರದ್ದುಗೊಂಡಿರುವ ಪ್ರಮುಖ ಗಣಿ ಕಂಪೆನಿಗಳಾಗಿವೆ.

ಟೆಂಡರ್‌ ಮೂಲಕ ಹರಾಜು: ಟೆಂಡರು ಪ್ರಕ್ರಿಯೆ ಮೂಲಕ ಈ 51 ಗಣಿಗಳಿಗೆ ಹೊಸದಾಗಿ ಗುತ್ತಿಗೆ ನೀಡುವಂತೆ ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಅದರಂತೆ ಶೀಘ್ರದಲ್ಲೇ ಹರಾಜು ಪ್ರಕ್ರಿಯೆ ನಡೆಸಲು ಸರ್ಕಾರ ನಿರ್ಧ­ರಿಸಿದೆ. ಈ ಸಂಬಂಧ ಈಗಾಗಲೇ ಸಿದ್ಧತೆಗಳು ಆರಂಭ­ವಾಗಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.