ADVERTISEMENT

ಹಿಂದೂಗಳ ಕೊಲೆ: ಎನ್‌ಐಎ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST

ನವದೆಹಲಿ: ಮಂಗಳೂರಿನ ಕಾಟಿಪಾಳ್ಯ ಕೈಕಂಬದಲ್ಲಿ ಬುಧವಾರ ನಡೆದಿರುವ ದೀಪಕ್‌ ರಾವ್‌ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸುವಂತೆ ಆಗ್ರಹಿಸಿ ರಾಜ್ಯದ ಬಿಜೆಪಿ ಸಂಸದರು ಸಂಸತ್‌ ಭವನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಸಂಸತ್‌ ಭವನದ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಘೋಷಣೆ ಕೂಗಿ, ಭಿತ್ತಿಪತ್ರ ಪ್ರದರ್ಶಿಸಿದ ಸಂಸದರು, ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಹಿಂದೂಗಳ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.

ಬಿಜೆಪಿ, ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗ ದಳ ಸಂಘಟನೆಯ ಜೊತೆ ಗುರುತಿಸಿಕೊಂಡಿರುವ, ಹಿಂದುಳಿದ ವರ್ಗಗಳಿಗೆ ಸೇರಿರುವ ಹಿಂದೂ ಕಾರ್ಯಕರ್ತರ ಕೊಲೆ ನಿರಂತರ ನಡೆಯುತ್ತಿದೆ. ದೀಪಕ್‌ ಕೊಲೆಯಿಂದ ಈ ಸಂಖ್ಯೆ 21ಕ್ಕೆ ಏರಿದೆ. ಆದರೂ ಆಡಳಿತಾರೂಢ ಕಾಂಗ್ರೆಸ್‌ ಇಂತಹ ಘಟನೆಗಳನ್ನು ತಡೆಯಲು ಕ್ರಮ ಕೈಗೊಂಡಿಲ್ಲ ಎಂದು ಸಂಸದರು ದೂರಿದರು.

ADVERTISEMENT

ಪ್ರಹ್ಲಾದ್‌ ಜೋಶಿ ಹಾಗೂ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಂತರ ಕೇಂದ್ರದ ಗೃಹ ಸಚಿವ ರಾಜನಾಥ ಸಿಂಗ್‌ ಅವರನ್ನು ಭೇಟಿ ಮಾಡಿದ ಸಂಸದರು, ಈ ಕೊಲೆ ಪ್ರಕರಣಗಳ ತನಿಖೆಯನ್ನು ಎನ್‌ಐಎಗೆ ವಹಿಸಬೇಕು, ಮಂಗಳೂರಿನಲ್ಲಿ ಎನ್‌ಐಎ ಕಚೇರಿಯನ್ನು ತೆರೆಯಬೇಕು ಎಂದು ಆಗ್ರಹಿಸಿದರು.

ಪಾಕಿಸ್ತಾನ ಪ್ರಾಯೋಜಿತ ಉಗ್ರಗಾಮಿ ಸಂಘಟನೆಗಳೊಂದಿಗೆ ಕೈಜೋಡಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸದಸ್ಯರಿಂದಲೇ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕೊಲೆಗಳು ನಡೆದಿವೆ. ಕೂಡಲೇ ಎನ್‌ಐಎ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.

ಪಿಎಫ್ಐ ಸಂಘಟನೆಯನ್ನು ನಿಷೇಧಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಸಿದ್ದರಾಮಯ್ಯ ಗಮನ ಹರಿಸುತ್ತಿಲ್ಲ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಸಿದ್ದರಾಮಯ್ಯ ಅವರು ಕೇರಳ ಮಾದರಿ ಅನುಸರಿಸುವ ಮೂಲಕ ಬಿಜೆಪಿಯನ್ನು ಹತ್ತಿಕ್ಕಲು ನೋಡುತ್ತಿದ್ದಾರೆ. ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಿದಲ್ಲಿ ಸತ್ಯಾಂಶ ಹೊರ ಬೀಳಲಿದೆ ಎಂದು ಪ್ರಹ್ಲಾದ್‌ ಜೋಶಿ ಹೇಳಿದರು. ಸಂಸದರಾದ ಬಸವರಾಜ ಪಾಟೀಲ ಸೇಡಂ, ಸುರೇಶ ಅಂಗಡಿ, ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ್‌, ಪಿ.ಸಿ. ಮೋಹನ್‌, ಮಲ್ಲಿಕಾರ್ಜುನ ಖೂಬಾ, ಪ್ರತಾಪ ಸಿಂಹ ಹಾಜರಿದ್ದರು.

ಕೊಲೆ ಪ್ರಕರಣಗಳ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಕೋರಿ ರಾಜ್ಯದ ಬಿಜೆಪಿ ಸಂಸದರು ಈ ಹಿಂದೆಯೂ ಎರಡು ಬಾರಿ ರಾಜನಾಥ ಸಿಂಗ್‌ ಅವರಿಗೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.