ADVERTISEMENT

ಪರ‍್ರೀಕರ್‌ ನಿಲುವಿಗೆ ಸಚಿವರಿಬ್ಬರ ಆಕ್ಷೇಪ

ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ಪ್ರಧಾನಿ ಎಚ್ಚರಿಕೆ ನೀಡಲಿ: ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST
ಪರ‍್ರೀಕರ್‌ ನಿಲುವಿಗೆ ಸಚಿವರಿಬ್ಬರ ಆಕ್ಷೇಪ
ಪರ‍್ರೀಕರ್‌ ನಿಲುವಿಗೆ ಸಚಿವರಿಬ್ಬರ ಆಕ್ಷೇಪ   

ಕಾತ್ರಾಳ (ವಿಜಯಪುರ)/ ಗದಗ: ಮಹದಾಯಿ ನೀರು ಹಂಚಿಕೆ ವಿಷಯವಾಗಿ ಗೋವಾ ಮುಖ್ಯಮಂತ್ರಿ ಮನೋಹರ ಪರ‍್ರೀಕರ್‌ ಹೇಳಿಕೆಗೆ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ ಅವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘ಪರ‍್ರೀಕರ್‌ ಪದೇ ಪದೇ ತಮ್ಮ ನಿಲುವು ಬದಲಿಸುತ್ತಿದ್ದಾರೆ. ಮೊದಲು, ಬರಪೀಡಿತ ಪ್ರದೇಶಕ್ಕೆ ನೀರು ಕೊಡಲು ಸಿದ್ಧವಿರುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಇದೀಗ ನದಿ ಪಾತ್ರದಿಂದ ಬೇರೆ ಕಣಿವೆಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ತಕರಾರು ತೆಗೆದಿದ್ದಾರೆ. ಯಡಿಯೂರಪ್ಪ ಈ ವಿಷಯದಲ್ಲಿ ರಾಜಕಾರಣ ಮಾಡದೇ ಸ್ಪಷ್ಟನೆ ನೀಡಬೇಕು’ ಎಂದು ಎಂ.ಬಿ. ಪಾಟೀಲ ಶುಕ್ರವಾರ ಪತ್ರಿಕಾ
ಗೋಷ್ಠಿಯಲ್ಲಿ ಆಗ್ರಹಿಸಿದರು.‌

ಪ್ರಕರಣ ನ್ಯಾಯಮಂಡಳಿಯ ಮುಂದಿರುವಾಗ, ಗೋವಾ ಮುಖ್ಯಮಂತ್ರಿ ರಾಜ್ಯದ ಜನರ ಹಾದಿತಪ್ಪಿಸುವ ಹೇಳಿಕೆ ನೀಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಲಸಂಪನ್ಮೂಲ ಇಲಾಖೆ ಪತ್ರ ಬರೆಯಲಿದೆ ಎಂದೂ ಅವರು ಹೇಳಿದರು.

ADVERTISEMENT

‘ಕುಡಿಯುವ ನೀರಿನ ಉದ್ದೇಶ ಹೊರತುಪಡಿಸಿ ಬೇರೆ ನದಿ ಕಣಿವೆಗೆ ನೀರು ನೀಡಲು ಬರುವುದಿಲ್ಲ ಎಂದು ಪರ್ರೀಕರ್‌ ಹೇಳಿದ್ದಾರೆ. ಆದರೆ, ಕೃಷ್ಣಾ ನ್ಯಾಯಮಂಡಳಿಯು ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಿಗೆ ಬೇರೆ ನದಿ ಕಣಿವೆಯಲ್ಲೂ ನೀರು ಬಳಸಲು ಅನುಮತಿ ನೀಡಿದೆ. ಈ ವಿಷಯವನ್ನು ಮಹದಾಯಿ ನ್ಯಾಯಮಂಡಳಿ ಗಮನಕ್ಕೆ ತರಲಾಗುವುದು’ ಎಂದರು.

2003ರಲ್ಲೇ ಕೇಂದ್ರ ಜಲ ಆಯೋಗ ಕಳಸಾ– ಬಂಡೂರಿ ನಾಲೆಗಳಿಗೆ 7.56 ಟಿಎಂಸಿ ಅಡಿ ನೀರು ನಿಗದಿಪಡಿಸಿದೆ. ಈ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯುಳ್ಳ ಸ್ಪಷ್ಟೀಕರಣವನ್ನು ನ್ಯಾಯಮಂಡಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಫೆ.6ರಿಂದ 22ರವರೆಗೆ ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆಯಲಿದೆ. ಶಿಷ್ಟಾಚಾರ ಉಲ್ಲಂಘಿಸಿ ಪತ್ರ ಬರೆದಿರುವುದು ಸೇರಿದಂತೆ ಎಲ್ಲ ವಿದ್ಯಮಾನವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನ್ಯಾಯಮಂಡಳಿಯ ಒಳಗೂ, ಹೊರಗೂ ಹೋರಾಟ ನಡೆಸಲು ಸಕಲ ಸಿದ್ಧತೆ ನಡೆಸಿದೆ. ಪರ‍್ರೀಕರ್‌, ಗೋವಾ ಪರ ವಕೀಲ ಆತ್ಮಾರಾಂ ನಾಡಕರ್ಣಿ ಅವರ ನಾಟಕವನ್ನು ಬಂದ್‌ ಮಾಡಲು ಯತ್ನಿಸಲಿದೆ ಎಂದು ಹೇಳಿದರು.

ಆಗಸ್ಟ್ 2018ರೊಳಗೆ ಅಂತಿಮ ತೀರ್ಪು ಹೊರಬರಲಿದೆ. ರಾಜ್ಯ ವಕೀಲರ ತಂಡ ಸಮರ್ಥ ವಾದ ಮಂಡಿಸಿದೆ. 190 ಟಿಎಂಸಿ ಅಡಿ ನೀರು ಸಮುದ್ರ ಪಾಲಾಗುತ್ತಿರುವುದನ್ನು ದಾಖಲೆ ಸಮೇತ ಸಲ್ಲಿಸಿದೆ. ರಾಜ್ಯಕ್ಕೆ ಸಿಗಬೇಕಾದ 36.558 ಟಿಎಂಸಿ ಅಡಿ ನೀರು ಸಿಗುವುದು ಬಹುತೇಕ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪರ‍್ರೀಕರ್‌ ಹೇಳಿಕೆ ಪರಿಗಣಿಸಿದರೆ ಬೆಳಗಾವಿ ಜಿಲ್ಲೆ ಖಾನಾಪುರಸುತ್ತಮುತ್ತಲಿನ ಭಾಗಕ್ಕೆ ಕೇವಲ 1.5 ಟಿಎಂಸಿ ಅಡಿ ನೀರು ಸಿಗಲಿದೆ. ಈ ನಿಟ್ಟಿನಲ್ಲಿ ಮಾತುಕತೆ ನಡೆಸಿದರೆ ರಾಜ್ಯಕ್ಕೆ ಕಿಂಚಿತ್ತೂ ಪ್ರಯೋಜ‌ನವಾಗದು. ಬರಪೀಡಿತ ಪ್ರದೇಶಕ್ಕೆ ಒಂದು ಹನಿ ನೀರೂ ಸಿಗದು’ ಎಂದು ಹೇಳಿದರು.

ಜಲನೀತಿಗೆ ವಿರುದ್ಧ

‘ದೇಶದ ಒಪ್ಪಿತ ರಾಷ್ಟ್ರೀಯ ಜಲನೀತಿಗೆ ವಿರುದ್ಧವಾಗಿ ಪರ‍್ರೀಕರ್‌ ಮಾತನಾಡುತ್ತಿರುವುದು ಖಂಡನಾರ್ಹ. ಇದು ಒಕ್ಕೂಟ ವ್ಯವಸ್ಥೆಗೆ ಆತಂಕ ತರುವ ವಿಷಯ. ಈ ಕುರಿತು ಪ್ರಧಾನಿ ಎಚ್ಚರಿಕೆ ನೀಡಬೇಕು’ ಎಂದು ಸಚಿವ ಎಚ್‌.ಕೆ. ಪಾಟೀಲ ಅವರು ಗದಗದಲ್ಲಿ ಆಗ್ರಹಿಸಿದರು.

‘ಇದುವರೆಗೆ ಕನ್ನಡಿಗರ ಹಕ್ಕನ್ನು ಪ್ರಶ್ನಿಸುತ್ತಿದ್ದ ಗೋವಾ ಮುಖ್ಯಮಂತ್ರಿ, ಈಗ ಮಹದಾಯಿ ತಿರುವನ್ನೇ ಪ್ರಶ್ನಿಸುತ್ತಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಸಮಸ್ಯೆ ಇತ್ಯರ್ಥಕ್ಕೆ ಸಿದ್ದರಾಮಯ್ಯ ಅವರು ಪರ‍್ರೀಕರ್‌ ಅವರಿಗೆ ಬರೆದಿರುವ ಪತ್ರಕ್ಕೆ ಇದುವರೆಗೆ ಸ್ಪಂದಿಸಿಲ್ಲ’ ಎಂದರು.

ಗೋವಾ ಮುಖ್ಯಮಂತ್ರಿಗೆ ಶಿವಸೇನಾ ತರಾಟೆ

ಪಣಜಿ (ಪಿಟಿಐ): ಕರ್ನಾಟಕ ಸೇರಿ ಮಹದಾಯಿ ನದಿಪಾತ್ರದ ರಾಜ್ಯಗಳ ಜತೆಗೆ ನೀರು ಹಂಚಿಕೊಳ್ಳಲೇಬೇಕಾಗುತ್ತದೆ ಎಂಬ ಹೇಳಿಕೆ ನೀಡಿದ್ದ ಗೋವಾ ಮುಖ್ಯಮಂತ್ರಿ ಮನೋಹರ ಪರ‍್ರೀಕರ್‌ ವಿರುದ್ಧ ಅಲ್ಲಿನ ಶಿವಸೇನಾ ಘಟಕ ಹರಿಹಾಯ್ದಿದೆ.

‘ಕರ್ನಾಟಕದ ಜತೆಗೆ ನೀರು ಹಂಚಿಕೊಳ್ಳಬೇಕಾಗುತ್ತದೆ ಎಂದು ಪರ‍್ರೀಕರ್‌ ಹೇಳಿರುವುದು ಗೋವಾಕ್ಕೆ ಆಘಾತ ತಂದಿದೆ. ಪರ‍್ರೀಕರ್‌ ನಾಯಕತ್ವದಲ್ಲಿ ಗೋವಾ ವಿಶ್ವಾಸ ಇರಿಸಿತ್ತು’ ಎಂದು ಸೇನಾದ ಗೋವಾ ಘಟಕದ ವಕ್ತಾರರಾದ ರಾಖಿ ಪ್ರಭುದೇಸಾಯಿ ಹೇಳಿದ್ದಾರೆ.

‘ಭಾರತವನ್ನು ಕಾಂಗ್ರೆಸ್‌ಮುಕ್ತಗೊಳಿಸುವ ಪ್ರಯತ್ನದ ಭಾಗವಾಗಿ ಪರ‍್ರೀಕರ್‌ ಮತ್ತು ಬಿಜೆಪಿ ಜತೆಯಾಗಿ ಗೋವಾವನ್ನು ಮಹದಾಯಿ ಮುಕ್ತವಾಗಿಸಲು ಹೊರಟಿದ್ದಾರೆ. ನೀರು ಹಂಚಿಕೆಯ ರಾಜಿಗೆ ಸಂಬಂಧಿಸಿ ಅತ್ಯಂತ ಕೀಳುಮಟ್ಟಕ್ಕೆ ಪರ‍್ರೀಕರ್‌ ಇಳಿದಿದ್ದಾರೆ’ ಎಂದು ರಾಖಿ ಆರೋಪಿಸಿದ್ದಾರೆ.

ಮಹದಾಯಿಯ ಒಂದೊಂದು ಹನಿ ನೀರಿಗಾಗಿಯೂ ಅವರು ‘ನಿಜವಾದ ಮಣ್ಣಿನ ಮಗನಂತೆ’ ಹೋರಾಡಬೇಕು ಎಂಬ ನಿರೀಕ್ಷೆ ಸೇನಾಕ್ಕೆ ಇತ್ತು. ಆದರೆ ಮಹದಾಯಿ ನೀರನ್ನು ಕರ್ನಾಟಕದ ಜತೆ ಹಂಚಿಕೊಳ್ಳುವುದು ಅನಿವಾರ್ಯ ಎಂದು ಅವರು ಹೇಳಿದ್ದಾರೆ. ಈ ಮೂಲಕ ಅವರು ಮತ್ತು ಬಿಜೆಪಿಯ ಬಣ್ಣ ಬಯಲಾಗಿದೆ ಎಂದು ರಾಖಿ ಹೇಳಿದ್ದಾರೆ.

ಪರ‍್ರೀಕರ್‌ ನಿಲುವನ್ನು ಸೇನಾ ಒಪ್ಪಿಕೊಳ್ಳುವುದಿಲ್ಲ. ಅಂತಹ ಹೇಳಿಕೆ ಯಾಕೆ ನೀಡಬೇಕಾಯಿತು ಎಂಬ ಪರ‍್ರೀಕರ್‌ ಸಮರ್ಥನೆ ಸ್ವೀಕಾರಾರ್ಹವಲ್ಲ. ಇದು ಕರ್ನಾಟಕದಲ್ಲಿ ಚುನಾವಣೆ ಗೆಲ್ಲುವ ತಂತ್ರದ ಭಾಗ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.