ADVERTISEMENT

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹಣಕಾಸಿನ ಕೊರತೆ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 8:54 IST
Last Updated 6 ಜನವರಿ 2018, 8:54 IST
ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹಣಕಾಸಿನ ಕೊರತೆ: ಸಿ.ಎಂ
ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹಣಕಾಸಿನ ಕೊರತೆ: ಸಿ.ಎಂ   

ಚಿಕ್ಕಮಗಳೂರು: ‘ರಾಜ್ಯದಲ್ಲಿ ಆರು ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೆ. ಆದರೆ, ಹಣಕಾಸಿನ ಲಭ್ಯತೆ ಕೊರತೆಯಿಂದಾಗಿ ಈ ವರ್ಷ ಕಾಲೇಜುಗಳ ಸ್ಥಾಪನೆ ಸಾಧ್ಯವಾಗುತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಐದು ಕೃಷಿ ವಿಶ್ವವಿದ್ಯಾಲಯಗಳು, ಒಂದು ತೋಟಗಾರಿಕೆ ವಿಶ್ವವಿದ್ಯಾಲಯ ಇದೆ. ಮೂಡಿಗೆರೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸುವ ಅಗತ್ಯ ಇದೆಯೇ ಎಂಬ ಕುರಿತು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಉತ್ತರಿಸಿದರು.

‘ಆರ್‌ಎಸ್‌ಎಸ್‌ ಅಥವಾ ಇನ್ನಾವುದೇ ಸಂಘಟನೆಗಳನ್ನು ನಿಷೇಧ ಮಾಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಕೋಮುಭಾವನೆ ಕೆರಳಿಸುವ ಸಂಘಟನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಮುಂದಿನ ಐದು ವರ್ಷದ ಪ್ರಣಾಳಿಕೆ ಮತ್ತು ಸರ್ಕಾರದಿಂದ ವಿಷನ್‌–2025 ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಇವೆರಡನ್ನು ಆಧರಿಸಿ ಹೊಸ ಕಾರ್ಯಕ್ರಮ, ಯೋಜನೆ ರೂಪಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರದ್ದು ಅತ್ಯಂತ ಭ್ರಷ್ಟ ಸರ್ಕಾರ ಎಂದು ಆಧಾರರಹಿತವಾಗಿ ವಿರೋಧ ಪಕ್ಷದವರು ಮಾಡುವ ಆರೋಪಗಳನ್ನು ಕೇಳಿಕೊಂಡು ಸುಮ್ಮನಿರಲು ಸಾಧ್ಯ ಇಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಜೈಲಿಗೆ ಹೋಗಿದ್ದವರು, ಇಂಥ ಆರೋಪಗಳನ್ನು ಮಾಡಲು ಅವರಿಗೆ ನೈತಿಕ ಹಕ್ಕಿಲ್ಲ ಎಂದು ನಾನು ಹೇಳಿದ್ದರಲ್ಲಿ ತಪ್ಪೇನಿದೆ. ವೈಯುಕ್ತಿಕವಾಗಿ ನಾನೂ ಯಾರನ್ನೂ ಟೀಕೆ ಮಾಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.