ADVERTISEMENT

ಹುಬ್ಬಳಿಯಲ್ಲಿ ಬಂದ್ ಬಿಸಿ: ವಾಹನಗಳ ಮೇಲೆ ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 5:34 IST
Last Updated 8 ಜನವರಿ 2018, 5:34 IST
ಪ್ರತಿಭಟನಾಕಾರರು ಅಲ್ಲಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಅಲ್ಲಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.   

ಹುಬ್ಬಳ್ಳಿ: ವಿಜಯಪುರದ ದಲಿತ ಬಾಲಕಿ ಮೇಲಿನ ಅತ್ಯಾಚಾರ, ಸಂವಿಧಾನ ಕುರಿತು ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ಹಾಗೂ ಮಹಾರಾಷ್ಟ್ರದ ಕೋರೆಗಾಂವ್‌ನಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ವಿವಿಧ ದಲಿತ ಪರ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಇಲ್ಲಿನ ಚನ್ನಮ್ಮ ವೃತ್ತ ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಯಿತು.

ದೇಶಪಾಂಡೆನಗರದಲ್ಲಿ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವಿಆರ್‌ಎಲ್‌ಬಸ್ ಮೇಲೆ ಕಲ್ಲು ತೂರಿದ್ದರಿಂದ ಗಾಜು ಪುಡಿಯಾಯಿತು. ಬಸ್ ನಿಲ್ದಾಣದ ಮುಂದೆ ವಿಆರ್‌ಎಲ್‌ಬಸ್‌ಗೆ ಕಲ್ಲು ತೂರಲಾಯಿತು. ಆಟೊ, ಕಾರುಗಳ ಮೇಲೆ ಕಲ್ಲು ತೂರಲಾಗಿದೆ.

ಹಳೇ ಬಸ್ ನಿಲ್ದಾಣದ ನಿಯಂತ್ರಣಾ ಕೊಠಡಿ ಮೇಲೆ ಕಲ್ಲು ತೂರಲಾಗಿದ್ದು ಗಾಜು ಜಖಂಗೊಂಡಿದೆ. ಉಳಿದಂತೆ ಪ್ರತಿಭಟನಾಕಾರರು ಅಲ್ಲಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಶಾಲಾ ಕಾಲೇಜುಗಳಿಗೆ ರಜೆ: ಬಂದ್ ಹಿನ್ನೆಲೆಯಲ್ಲಿ ಇಲ್ಲಿನ ಕೇಂದ್ರೀಯ ವಿದ್ಯಾಲಯ ಸೇರಿದಂತೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಚಿಕ್ಕೋಡಿ (ಜಿಲ್ಲೆ-ಬೆಳಗಾವಿ):  ಭೀಮಾ ಕೋರೆಗಾಂವ್ ಗಲಭೆ ಮತ್ತು ವಿಜಯಪುರ ದಲಿತ ಬಾಲಕಿ ಅತ್ಯಾಚಾರ ಘಟನೆ ಖಂಡಿಸಿ ಚಿಕ್ಕೋಡಿಯಲ್ಲೂ ಸೋಮವಾರ ಬಂದ್‌ಗೆ ಕರೆ ನೀಡಲಾಗಿದೆ.

ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದು, ಅಂಗಡಿ ಮುಂಗ್ಗಟ್ಟುಗಳನ್ನು ಮುಚ್ಚಲಾಗಿವೆ. ಶಾಲಾ ಕಾಲೇಜುಗಳಿಗೆ ಅಘೋಷಿತ ರಜೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.