ADVERTISEMENT

ಒಳಮೀಸಲು: ಎಡಗೈ– ಬಲಗೈನಲ್ಲಿ ಒಗ್ಗಟ್ಟು

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST

ಮೈಸೂರು: ‘ಒಳಮೀಸಲಾತಿಗಾಗಿ ಎಡಗೈ ಹಾಗೂ ಬಲಗೈ ಸಮೂಹಗಳು ಒಂದಾಗಿಯೇ ಹೋರಾಟ ಮಾಡಬೇಕು’ ಎಂಬ ಒಕ್ಕೊರಲ ಕೂಗು ನಗರದಲ್ಲಿ ಮಂಗಳವಾರ ಕೇಳಿಬಂತು.

‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ– ಹೋರಾಟ ವಿಚಾರ ಸಂಕಿರಣ ಸಮಿತಿ’ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ, ಎರಡೂ ಸಮೂಹಗಳ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದರು. ಸಮಾಜದಲ್ಲಿ ಒಡಕು ಕಾಣಿಸಿಕೊಳ್ಳದಂತೆ ನೋಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.

‘ಆಯೋಗದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿರುವುದು ಮತ್ತು ಒಳಮೀಸಲಾತಿ ಬಗೆಗಿನ ತಪ್ಪು ಕಲ್ಪನೆಯಿಂದ ಪರಸ್ಪರ ದೂರವಾಗಿದ್ದೇವೆ. ಒಬ್ಬರಿಗೊಬ್ಬರು ನಂಟಸ್ತಿಕೆ ಬೆಳೆಸಿಕೊಳ್ಳುವ ಮಟ್ಟಿಗೆ ಬೆಸೆದುಕೊಳ್ಳಬೇಕು. ಎಡ–ಬಲ ಎಂದು ವಿಂಗಡಣೆಯಾಗಿದ್ದರಿಂದ ರಾಜಕೀಯವಾಗಿಯೂ ಹಿಂದೆ ಬಿದ್ದಿದ್ದೇವೆ. ಒಂದಾಗಿ ಹೋರಾಟ ಮಾಡಿ ಒಳಮೀಸಲಾತಿ ಪಡೆಯಬೇಕು. ಬಳಿಕವೂ ರಾಜಕೀಯ ಹಾಗೂ ಆರ್ಥಿಕ ಪ್ರಾಬಲ್ಯ ಪಡೆಯಲು ಒಬ್ಬರಿಗೊಬ್ಬರು ಕೈ ಜೋಡಿಸಬೇಕು’ ಎಂದು ಮುಖಂಡರು ಇಂಗಿತ ವ್ಯಕ್ತಪಡಿಸಿದರು.

ADVERTISEMENT

ಜ. 13ರಂದು ಎಡ– ಬಲ ಮುಖಂಡರೊಂದಿಗೆ ಒಟ್ಟಿಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಯ ನೀಡಿದ್ದಾರೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಅವತ್ತು ಸೇರಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಚೆರ್ಚಿಸುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್‌.ಮಹೇಶ್, ಪ್ರೊ.ಬಿ.ಕೃಷ್ಣಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ.ದೊರೈರಾಜ್‌, ಅಖಿಲ ಭಾರತ ಛಲ
ವಾದಿ ಮಹಾಸಭಾ ಅಧ್ಯಕ್ಷ ಕುಮಾರ್‌, ವಿಶ್ರಾಂತ ಪ್ರಾಧ್ಯಾಪಕ ವಿ.ಕೆ.ನಟರಾಜ್‌ ಸೇರಿದಂತೆ ಹಲವು ಮುಖಂಡರು, ವಕೀಲರು, ಉಪನ್ಯಾಸಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.