ADVERTISEMENT

ಚಿಕ್ಕಮಗಳೂರಿನ ಸಚಿನ್‌ಗೆ 13 ಪದಕಗಳ ‘ಕೀರ್ತಿ’

ವಿಟಿಯು ಘಟಿಕೋತ್ಸವ: ವಿದ್ಯಾರ್ಥಿನಿಯರ ಮೇಲುಗೈ : ವಿದ್ಯಾರ್ಥಿಗಳಿಗೆ ಜನಸೇವೆ ಕನಸು

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST
ಚಿಕ್ಕಮಗಳೂರಿನ ಸಚಿನ್‌ಗೆ 13 ಪದಕಗಳ ‘ಕೀರ್ತಿ’
ಚಿಕ್ಕಮಗಳೂರಿನ ಸಚಿನ್‌ಗೆ 13 ಪದಕಗಳ ‘ಕೀರ್ತಿ’   

ಬೆಳಗಾವಿ: ಹದಿಮೂರು ಚಿನ್ನದ ಪದಕಗಳಿಗೆ ಕೊರಳೊಡ್ಡಿದ ಚಿಕ್ಕಮಗಳೂರಿನ ಆದಿಚುಂಚನಗಿರಿ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿ ಎನ್‌. ಸಚಿನ್‌ ಕೀರ್ತಿ (ಬಿ.ಇ ಸಿವಿಲ್‌), ಮಂಗಳವಾರ ಆಯೋಜಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದ ‘ಚಿನ್ನದ ಹುಡುಗ’ನಾಗಿ ಸಂಭ್ರಮಿಸಿದರು.

ಬಿ.ಇ. ಸಿವಿಲ್‌ ಎಂಜಿನಿಯರಿಂಗ್‌ ಪರೀಕ್ಷೆಯಲ್ಲಿ ಶೇ 89.25ರಷ್ಟು ಅಂಕ ಗಳಿಸಿರುವ ಸಚಿನ್‌, ಎಂಟೂ ಸೆಮಿಸ್ಟರ್‌ಗಳಲ್ಲಿ ವಿಟಿಯುದಿಂದ ಮಾನ್ಯತೆ ಪಡೆದ ಎಲ್ಲ ಕಾಲೇಜುಗಳಲ್ಲಿಯೇ ಅತಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ, ಪದಕ ಪ್ರದಾನ ಮಾಡುತ್ತಿದ್ದಂತೆಯೇ ಸಭಾಂಗಣವು ಕಿವಿಗಡಚಿಕ್ಕುವ ಕರತಾಡನದಿಂದ ತುಂಬಿ ಹೋಯಿತು.

ಸಚಿನ್‌, ಚಿಕ್ಕಮಗಳೂರಿನ ಸಿವಿಲ್‌ ಗುತ್ತಿಗೆದಾರ ನವೀನ್‌ ಕೀರ್ತಿ– ಗೃಹಿಣಿ ಸುಧಾ ದಂಪತಿಯ ಪುತ್ರ. ಸದ್ಯಕ್ಕೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಲ್ಲಿ (ಕೆಆರ್‌ಐಡಿಎಲ್‌) ಸಹಾಯಕ ಎಂಜಿನಿಯರ್‌ ಹುದ್ದೆಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಐಇಎಸ್‌ (ಭಾರತೀಯ ಎಂಜಿನಿಯರಿಂಗ್‌ ಸೇವೆ) ಅಧಿಕಾರಿಯಾಗಿ ಜನಸೇವೆ ಮಾಡುವ ಕನಸು ಅವರದು. ‘ಹೈದರಾಬಾದ್‌ನ ಎಸಿಇ ಅಕಾಡೆಮಿಯಲ್ಲಿ ಅಕ್ಟೋಬರ್‌ನಿಂದಲೂ ತರಬೇತಿ ಪಡೆಯುತ್ತಿದ್ದೇನೆ. 2019ರಲ್ಲಿ ಪರೀಕ್ಷೆ ಬರೆಯಲು ಸಿದ್ಧವಾಗುತ್ತಿದ್ದೇನೆ’ ಎಂದು ತಿಳಿಸಿದರು.

ADVERTISEMENT

ತಾಯಿಗೆ ಅರ್ಪಣೆ: ಬಡತನದ ನಡುವೆಯೂ ತಮ್ಮನ್ನು ಓದಿಸಿದ ತಾಯಿಗೆ, ಪದಕಗಳನ್ನು ಅರ್ಪಿಸಿದವರು ಬಿಇ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್‌ ಪಡೆದ ಎಸ್‌. ಬಿಂದು.

ಬೆಂಗಳೂರಿನ ಶಿರಡಿ ಸಾಯಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ. ಆನೇಕಲ್‌ ಸಮೀಪದ ಗುಡ್ಡನಹಳ್ಳಿಯವರು. ತಾಯಿ ಗ್ರಂಥಾಲಯ ಸಹಾಯಕಿಯಾಗಿ ದುಡಿಯುತ್ತಿರುವ ಕಾಲೇಜಿನಲ್ಲಿಯೇ ವ್ಯಾಸಂಗ ಮಾಡಿ ಸಾಧನೆ ತೋರಿದ್ದಾರೆ. ‘7ನೇ ತರಗತಿಯಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡೆ. ಬಡತನದ ನಡುವೆಯೂ ತಾಯಿ ನನ್ನನ್ನು ಓದಿಸಿದರು. ನನಗೆ ದೊರೆತ ಐದು ಪದಕಗಳನ್ನೂ ಅರ್ಪಿಸುತ್ತೇನೆ’ ಎಂದು ಭಾವುಕರಾದರು.

ಇಸ್ರೊ ಸೇರಬೇಕೆಂಬ ತಮ್ಮ ಕನಸಿನ ಸಾಕಾರಕ್ಕಾಗಿ ಪರೀಕ್ಞಾ ಸಿದ್ಧತೆ ನಡೆಸಿರುವ ಬಿಂದು, ಈಗ ಬೆಂಗಳೂರಿನಲ್ಲಿ ಟಿಇಎಸ್ ಕಂಪೆನಿಯಲ್ಲಿ ಸಿಕ್ಕಿರುವ ಕೆಲಸಕ್ಕೆ ಸೇರುವುದೋ ಬಿಡುವುದೋ ಎಂಬ ತುಮುಲದಲ್ಲಿದ್ದಾರೆ.

ಕಚೇರಿ ಸಹಾಯಕನ ಪುತ್ರಿಗೆ 3 ಚಿನ್ನ

ಬಿ.ಇ. ಮಾಹಿತಿ ವಿಜ್ಞಾನ ಹಾಗೂ ಎಂಜಿನಿಯರಿಂಗ್‌ ಕೋರ್ಸ್‌ನಲ್ಲಿ ಪ್ರಥಮ ರ‍್ಯಾಂಕ್‌ ಗಳಿಸಿ 3 ಚಿನ್ನದ ಪದಕ ಪಡೆದ ಬೆಂಗಳೂರಿನ ದಯಾನಂದ ಸಾಗರ ಎಂಜಿನಿಯರಿಂಗ್‌ ಕಾಲೇಜಿನ ಎಂ.ಎಲ್‌. ಅಶ್ವಿನಿಗೆ ತಂದೆಯ ಆಸೆಯಂತೆ ವಾಯುಸೇನೆಗೆ ಸೇರಬೇಕು ಎನ್ನುವ ಆಸೆ.

ಕೊಡಗಿನ ಭಾಗಮಂಡಲದ ಅಶ್ವಿನಿ ಫೆಬ್ರುವರಿಯಲ್ಲಿ ನಡೆಯಲಿರುವ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಅಕ್ಸೆಂಚರ್‌ ಕಂಪೆನಿಯಲ್ಲಿ ನವೆಂಬರ್‌ನಿಂದ ಅಸೋಸಿಯೇಟ್‌ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾರೆ.

‘ತಂದೆ ಲಾಲುಕುಮಾರ್‌ ಎಕ್ಸ್‌ಪೋಸರ್‌ ಮೀಡಿಯಾ ಮಾರ್ಕೆಟಿಂಗ್‌ ಕಂಪೆನಿಯಲ್ಲಿ ಕಚೇರಿ ಸಹಾಯಕರಾಗಿದ್ದಾರೆ. ಆರ್ಥಿಕವಾಗಿ ಅಷ್ಟೊಂದು ಶಕ್ತರಲ್ಲ. ಬಹಳ ಕಷ್ಟಪಟ್ಟು ಓದಿಸಿದ್ದಾರೆ. ಸೇನೆಗೆ ಸೇರಬೇಕೆಂಬ ತಂದೆಯ ಕನಸು ನನಸಾಗಿಸಲು ಯತ್ನಿಸುತ್ತಿದ್ದೇನೆ’ ಎಂದು ತಿಳಿಸಿದರು.

ಓದಿನಲ್ಲೂ ಮಿಂಚಿದ ಭರತನಾಟ್ಯ ಪ್ರತಿಭೆ: ಭರತನಾಟ್ಯ ಪ್ರತಿಭೆ, ಬೆಂಗಳೂರಿನ ಆರ್‌ಎನ್‌ಎಸ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿನಿ ಅಪೂರ್ವಾ ಶರ್ಮಾ ಬಿ.ಇ. ಇನ್‌ಸ್ಟ್ರುಮೆಂಟೇಷನ್‌ ಟೆಕ್ನಾಲಜಿಯಲ್ಲಿ ಪ್ರಥಮ ರ‍್ಯಾಂಕ್‌ ಪಡೆದು ನಾಲ್ಕು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಎಲೆಕ್ಟ್ರಿಕಲ್‌ ಎಂಜಿನಿಯರ್‌ ಯೋಗೀಶ್‌ ಶರ್ಮಾ ಹಾಗೂ ಶೈಲಜಾ ದಂಪತಿ ಪುತ್ರಿ. ‘ಸಂಶೋಧನಾ ಕ್ಷೇತ್ರದಲ್ಲಿ ಸಾಧಿಸಬೇಕು ಎನ್ನುವ ಹಂಬಲವಿದೆ. ಮುಂದಿನ ತಿಂಗಳು ‘ಜಿಎಟಿಇ’ ಪರೀಕ್ಷೆ ಬರೆಯಲು ಸಿದ್ಧವಾಗುತ್ತಿದ್ದೇನೆ. ಸೆಪ್ಟೆಂಬರ್‌ನಿಂದ ಅಕ್ಸೆಂಚರ್‌ ಕಂಪೆನಿಯಲ್ಲಿ ಅಸೋಸಿಯೇಟ್‌ ಸಾಫ್ಟ್‌ವೇರ್‌ ಡೆವಲಪರ್‌ ಆಗಿ ಕೆಲಸ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

‘15 ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದು, ವಿದ್ವತ್‌ ಕೂಡ ಮಾಡಿದ್ದೇನೆ. ಆದರೆ, ಓದಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೇನೆ. ಭರತನಾಟ್ಯ ರಂಗಪ್ರವೇಶ ಮಾಡುವುದಕ್ಕೋಸ್ಕರ ಹಣ ಸಂಗ್ರಹಿಸುತ್ತಿದ್ದೇನೆ. ಇಸ್ರೊ ಅಥವಾ ಡಿಆರ್‌ಡಿಒದಲ್ಲಿ ಕೆಲಸ ಮಾಡಬೇಕು ಎನ್ನುವ ಬಯಕೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.