ADVERTISEMENT

‘ಬಿಜೆಪಿಯಿಂದ ಕ್ರಿಮಿನಲ್ ರಾಜಕಾರಣ’

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಆರೋಪ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 19:30 IST
Last Updated 11 ಜನವರಿ 2018, 19:30 IST

ವಿಜಯಪುರ: ‘ರಾಜ್ಯದಲ್ಲಿನ ಸೌಹಾರ್ದ ವಾತಾವರಣ ಹಾಳು ಮಾಡಿ, ಅಶಾಂತಿ ಸೃಷ್ಟಿಸಲು ಬಿಜೆಪಿ ಕ್ರಿಮಿನಲ್‌ ರಾಜಕಾರಣ ಮಾಡುತ್ತಿದೆ. ಈ ನಿಟ್ಟಿನಲ್ಲಿ ವ್ಯವಸ್ಥಿತ ಪಿತೂರಿ ನಡೆಸುತ್ತಿದೆ’ ಎಂದು ಪ್ರದೇಶ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ದೂರಿದರು.

‘ಎಲ್ಲೆಡೆ ಕೋಮುವಾದದ ವಿಷ ಬೀಜ ಬಿತ್ತುತ್ತಿದೆ. ಸಾವನ್ನು ರಾಜಕೀಯ ಕೊಲೆಗಳನ್ನಾಗಿ ಪರಿವರ್ತಿಸಿ, ಅಶಾಂತಿ ಸೃಷ್ಟಿಸುವುದೇ ಬಿಜೆಪಿ ನಾಯಕರ ಕೆಲಸವಾಗಿದೆ. ಇದಕ್ಕೆ ಅವಕಾಶ ಕೊಡಬಾರದು’ ಎಂದು ಗುರುವಾರ ಇಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಮಹದಾಯಿ ವಿಷಯದಲ್ಲಿ ಬಿಜೆಪಿ ದೊಡ್ಡ ನಾಟಕವಾಡಿದೆ. ರಾಜ್ಯದ ಜನರನ್ನು ವಂಚಿಸುವ ಕೆಲಸ ಮಾಡುತ್ತಿದೆ. ಸಮಸ್ಯೆ ಬಗೆಹರಿಸಿಕೊಳ್ಳುವ ನೈಜ ಇಚ್ಚಾಶಕ್ತಿ ಇದ್ದರೆ ಗೋವಾ ಮುಖ್ಯಮಂತ್ರಿ ಅವರು, ಕರ್ನಾಟಕದ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಗೆ ಪತ್ರ ಬರೆಯಬೇಕಿತ್ತು. ಅದನ್ನು ಬಿಟ್ಟು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಿಗೆ ಪತ್ರ ಬರೆದಿದ್ದು ರಾಜಕೀಯವಲ್ಲದೆ ಮತ್ತೇನು’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಕೋಮುವಾದ ಪ್ರಚೋದಿಸುವ ಯಾವುದೇ ಸಂಘಟನೆಯಾದರೂ ಅದರ ವಿರುದ್ಧ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ವೇಣುಗೋಪಾಲ್‌ ‘ಪಿಎಫ್ಐ ನಿಷೇಧದ ಪ್ರಶ್ನೆಯೇ ಬರುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.