ADVERTISEMENT

‘ಸಾಹಿತ್ಯದಲ್ಲಿ ಎಡ–ಬಲ ವಿಂಗಡಣೆ ಸಲ್ಲ’

ನೃಪತುಂಗ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭೈರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 19:30 IST
Last Updated 12 ಜನವರಿ 2018, 19:30 IST
‘ಸಾಹಿತ್ಯದಲ್ಲಿ ಎಡ–ಬಲ ವಿಂಗಡಣೆ ಸಲ್ಲ’
‘ಸಾಹಿತ್ಯದಲ್ಲಿ ಎಡ–ಬಲ ವಿಂಗಡಣೆ ಸಲ್ಲ’   

ಬೆಂಗಳೂರು: ‘ಸಾಹಿತಿ ಮತ್ತು ಸಾಹಿತ್ಯವನ್ನು ಎಡ ಅಥವಾ ಬಲವೆಂದು ವಿಂಗಡಿಸುವ ಪ್ರವೃತ್ತಿ ಒಳ್ಳೆಯದಲ್ಲ. ವಿಶ್ವವಿದ್ಯಾಲಯಗಳ ಬೋಧಕರು ಕೂಡ ವಿದ್ಯಾರ್ಥಿಗಳಿಗೆ ಶುದ್ಧ ಸಾಹಿತ್ಯ ಹೇಳಿಕೊಡದೆ, ಮೊದಲೇ ಸಿದ್ಧಾಂತ ತಲೆಗೆ ತುಂಬಿ ದಾರಿತಪ್ಪಿಸುತ್ತಿದ್ದಾರೆ’ ಎಂದು ಕಾದಂಬರಿಕಾರ ಡಾ.ಎಸ್‌.ಎಲ್‌.ಭೈರಪ್ಪ ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಗರದಲ್ಲಿ ಶುಕ್ರವಾರ ನೀಡಿದ ₹7 ಲಕ್ಷ ನಗದು ಒಳಗೊಂಡ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

‘ಒಂದು ಕೃತಿ ಹೊರಬಂದಾಗ ಲೇಖಕನನ್ನು ಈತ ಬಲಪಂಥೀಯ, ಈತನ ಸಾಹಿತ್ಯ ಸಮಾಜದ ಪ್ರಗತಿಗೆ ಅಡ್ಡಿಯಾಗಿದೆ ಓದಬೇಡಿ ಎನ್ನುವುದು, ಇನ್ಯಾವುದೋ ಕೃತಿ ಬಂದಾಗ ‘ಇದು ನಮ್ಮದು, ಎಡಪಂಥೀಯರದ್ದು. ಇದನ್ನು ಓದಿ’ ಎಂದು ಪ್ರಚಾರ ಮಾಡುವುದು ವಿಶ್ವವಿದ್ಯಾಲಯಗಳ ಒಳಗೂ ಮತ್ತು ಹೊರಗೂ ನಡೆಯುತ್ತದೆ. ಇದು ಇವರಿಗೆ ಯಾಕೆ ಬೇಕು? ಇದರ ಪರಿಣಾಮ ಯುವ ಬರಹಗಾರರಿಗೆ ಮುಂದೆ ಯಾವ ದಾರಿಯಲ್ಲಿ ಸಾಗಬೇಕೆನ್ನುವುದು ಗೊತ್ತಾಗುವುದಿಲ್ಲ. ಮುಂದೆ ದೊಡ್ಡ ಸಾಹಿತಿಯಾಗಿ ಬೆಳೆಯುವಂತಹ ಶಕ್ತಿ ಇರುವವರು ದಾರಿ ತಪ್ಪಿದರೆ, ಅವರು ಎಂದಿಗೂ ದೊಡ್ಡ ಸಾಹಿತಿಯಾಗಿ ಬೆಳೆಯುವುದಿಲ್ಲ’ ಎಂದರು.

ADVERTISEMENT

‘ಸಾಹಿತ್ಯ ಸಮ್ಮೇಳನಗಳೂ ಎಡ–ಬಲ ಹಣೆಪಟ್ಟಿಯಿಂದ ಮುಕ್ತವಾಗುತ್ತಿಲ್ಲ. ಸಾಹಿತ್ಯದ ಗುರಿ ಓದುಗರನ್ನು ದಾರಿ ತಪ್ಪಿಸಬಾರದು. ಓದುಗರಿಗೂ ತರಬೇತಿ ಬೇಕಾಗಿದೆ. ಹಾಗೆಯೇ ಎಷ್ಟೋ ಜನರಿಗೆ ಬರೆಯುವ ಶಕ್ತಿ ಇದೆ. ವ್ಯಾಪಕವಾದ ಜೀವನ ಅನುಭವವೂ ಇರುತ್ತದೆ. ಅವರಿಗೂ ಸರಿಯಾದ ತರಬೇತಿ ನೀಡಿದರೆ ಉತ್ಕೃಷ್ಟ ಸಾಹಿತ್ಯ ರಚಿಸಬಲ್ಲರು’ ಎಂದರು.

‘ಸಮಾಜದ ಸಮಸ್ಯೆಗಳಿಗೆ ಉತ್ತರಿಸುತ್ತಾ ಕುಳಿತರೆ ಸಾಹಿತಿ ರಾಜಕಾರಣಿಗಳ ಬೆನ್ನು ಬೀಳಬೇಕಾಗುತ್ತದೆ. ಅವರ ಮರ್ಜಿಗೆ ಬಿದ್ದು ಬರವಣಿಗೆ ಸ್ವಾತಂತ್ರ್ಯ ಕಳೆದುಕೊಳ್ಳಬೇಕಾಗುತ್ತದೆ. ನಾನು ಆರಂಭದಿಂದಲೂ ಶುದ್ಧ ಸಾಹಿತ್ಯದ ಮೇಲೆ ನಂಬಿಕೆ ಇಟ್ಟವನು. ತತ್ವಶಾಸ್ತ್ರ ಮತ್ತು ಕಾವ್ಯಮೀಮಾಂಸೆ ಓದಿಕೊಂಡಿದ್ದರಿಂದ ನಾನು ದಾರಿತಪ್ಪಲಿಲ್ಲ. ಹಾಗಾಗಿಯೇ ಇಷ್ಟು ಬರೆಯಲು ಸಾಧ್ಯವಾಯಿತು. ಅರ್ಧ ಶತಮಾನದ ಹಿಂದೆ ಬರೆದಿದ್ದನ್ನೂ ಇಂದಿಗೂ ಜನರು ಪ್ರೀತಿಸುತ್ತಿದ್ದಾರೆ’ ಎಂದರು.

ಎಸ್‌.ರಾಮಲಿಂಗೇಶ್ವರ (ಸಿಸಿರಾ), ಡಾ.ಸಿ.ನಂದಿನಿ, ಶಾಂತಿ ಕೆ.ಅಪ್ಪಣ್ಣ, ಗುರಪ್ಪ ಗಾಣಿಗೇರ ಅವರಿಗೆ ತಲಾ ₹25,000 ನಗದು ಒಳಗೊಂಡ ‘ಮಯೂರವರ್ಮ ಸಾಹಿತ್ಯ ಪ್ರಶಸ್ತಿ'ಯನ್ನು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನುಬಳಿಗಾರ್‌ ಪ್ರದಾನ ಮಾಡಿದರು.

***

ಭೈರಪ್ಪ ಅವರು ರಾಜ್ಯದಲ್ಲಿ ಅವಜ್ಞೆಗೆ ಗುರಿಯಾಗಿದ್ದರೂ ಅವರ ಕೀರ್ತಿ ಸಪ್ತಸಾಗರದಾಚೆಗೆ ವಿಸ್ತರಿಸಿದೆ. ಸತ್ವಯುತ ಮತ್ತು ಮೌಲ್ವಿಕ ಸಾಹಿತ್ಯ ರಚನೆಯಿಂದ ಮೇಲೆ ಬಂದಿದ್ದಾರೆ.
- ಡಾ.ಪ್ರಧಾನ ಗುರುದತ್ತ, ಹಿರಿಯ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.