ADVERTISEMENT

ಮುಖ್ಯಮಂತ್ರಿ ಮನೆ ಮುತ್ತಿಗೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ಮುಖ್ಯಮಂತ್ರಿ ಮನೆ ಮುತ್ತಿಗೆಗೆ ಯತ್ನ
ಮುಖ್ಯಮಂತ್ರಿ ಮನೆ ಮುತ್ತಿಗೆಗೆ ಯತ್ನ   

ಬೆಂಗಳೂರು: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಅಹೋರಾತ್ರಿ ಧರಣಿ ಕೈಗೊಂಡಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರು, ಮುಖ್ಯಮಂತ್ರಿ ಮನೆಗೆ ಭಾನುವಾರ ಮುತ್ತಿಗೆ ಹಾಕಲು ಯತ್ನಿಸಿದರು.

ಪ್ರತಿಭಟನಾ ಸ್ಥಳದಿಂದ ಕುಮಾರಕೃಪಾ ರಸ್ತೆಯತ್ತ ಮೆರವಣಿಗೆ ಮೂಲಕ ಹೊರಟಿದ್ದ ಪ್ರತಿಭಟನಾಕಾರರನ್ನು ಮೌರ್ಯ ವೃತ್ತದಲ್ಲಿ ಪೊಲೀಸರು ತಡೆದು ನಿಲ್ಲಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.‌ ತಳ್ಳಾಟವೂ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಮಾಹಿತಿ ಪಡೆದು ಪ್ರತಿಭಟನಾ ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಪ್ರತಿಭಟನಾಕಾರರ ಜತೆ ಸಂಧಾನ ನಡೆಸಿದರು. ಈ ವೇಳೆ ಮುಖ್ಯಮಂತ್ರಿ ಪರ ಮಾತನಾಡಿದ ಸಚಿವರನ್ನು ತರಾಟೆಗೆ ತೆಗೆದುಕೊಂಡ ಸಮಿತಿಯ ಪದಾಧಿಕಾರಿಗಳು, ‘ಇದು ಸರ್ಕಾರದ ಸಾಧನಾ ಸಮಾವೇಶ ಅಲ್ಲ’ ಎಂದು ಟೀಕಿಸಿದರು.

‘ಆಯೋಗದ ವರದಿ ಜಾರಿಗಾಗಿ ಹಲವು ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ಶುಕ್ರವಾರದಿಂದ ಅಹೋರಾತ್ರಿ ಧರಣಿಯನ್ನೂ ಹಮ್ಮಿಕೊಂಡಿದ್ದೇವೆ.  ಮುಖ್ಯಮಂತ್ರಿ ಅವರು ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಪದಾಧಿಕಾರಿಗಳು ಹೇಳಿದರು.

ADVERTISEMENT

‘ಆಯೋಗದ ಶಿಫಾರಸುಗಳ ಜಾರಿ ಬಗ್ಗೆ ಪರಿಶಿಷ್ಟರಲ್ಲಿದ್ದ ಕೆಲವು ಭಿನ್ನಾಭಿಪ್ರಾಯ ಮತ್ತು ಅನುಮಾನಗಳು ಮಾತುಕತೆ ಮೂಲಕ ಬಗೆಹರಿದಿವೆ. ವರದಿ ವೈಜ್ಞಾನಿಕವಾಗಿದೆ ಎಂಬುದು ಮನದಟ್ಟಾಗಿದೆ. ಹೀಗಾಗಿ ಈ ವರದಿಯನ್ನು ರಾಜ್ಯ ಸರ್ಕಾರವು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಸಚಿವ ಆಂಜನೇಯ, ‘ನಿಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ  ಸೋಮವಾರ ಸಭೆ ಕರೆದಿದ್ದಾರೆ. ನೀವೆಲ್ಲರೂ ಬನ್ನಿ’ ’ ಎಂದು ಮನವಿ ಮಾಡಿದರು. ಅದಕ್ಕೆ ಪದಾಧಿಕಾರಿಗಳು ಒಪ್ಪಿ ಮುಖ್ಯಮಂತ್ರಿ ಮನೆ ಮುತ್ತಿಗೆ ತೀರ್ಮಾನವನ್ನು ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.