ADVERTISEMENT

‘ನಿರುಪದ್ರವಿ’ ಸಾಹಿತಿಗಳಿಗೆ ನೃಪತುಂಗ ಪ್ರಶಸ್ತಿ: ಕುಂವೀ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST

ಧಾರವಾಡ: ‘ರಾಜಕಾರಣಿಗಳನ್ನು ಬೆನ್ನುಹತ್ತುವ ’ನಿರುಪದ್ರವಿ’ ಸಾಹಿತಿಗಳಿಗೆ ಇಂದು ನೃಪತುಂಗ ಪ್ರಶಸ್ತಿ ಹಾಗೂ ನಿಗಮಗಳ ಅಧಿಕಾರ ದೊರೆಯುತ್ತದೆ. ಯಡಿಯೂರಪ್ಪ, ಸಿದ್ದರಾಮಯ್ಯ ಪಕ್ಕ ಕುಳಿತು ಯಾರಿಗೂ ತೊಂದರೆ ಕೊಡದೆ ಬರೆಯುತ್ತಾ ಕೂರುವ ಅಂಥ ಕೆಲವರು ಇಂದು ನಮ್ಮಲ್ಲಿ ಇದ್ದಾರೆ’ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ವ್ಯಂಗ್ಯವಾಡಿದರು.

ಇಲ್ಲಿನ ರಂಗಾಯಣದ ಸಮುಚ್ಚಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಸಾಹಿತ್ಯ ಸಂಕ್ರಾಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜಕಾರಣದ ಕುರಿತು ಕವಿಗಳು ಹಾಗೂ ಸಾಹಿತಿಗಳು ಮಾತನಾಡಬಾರದು ಎಂದು ಹೇಳುವ ಹಲವರನ್ನು ನಾವಿಂದು ಕಾಣಬಹುದು. ಸಮಾಜದ ಕುರಿತಾಗಿ ಯಾರೊಬ್ಬರೂ ಚಿಂತನೆ ಮಾಡಬಾರದು ಎಂಬ ಸ್ಥಿತಿಯಲ್ಲಿದ್ದೇವೆ. ಹಾಗೆ ಯೋಚಿಸಿ, ‘ಉಪದ್ರವಿ’ ಎನಿಸುವ ಲೇಖಕ ಸಮಾಜದಲ್ಲಿ ಹುಚ್ಚನಾಗುತ್ತಾನೆ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ದೇಶದಲ್ಲಿ ಹಿಂದೂ ಧರ್ಮ ಎನ್ನುವುದು ಇಲ್ಲ. ನಾವೆಲ್ಲರೂ ದ್ರಾವಿಡರು. ಧರ್ಮವನ್ನು ಇಟ್ಟುಕೊಂಡು ಸ್ಥಳೀಯತೆಯನ್ನು ನಾಶ ಮಾಡುವ ಸಂಚು ಇಂದು ನಡೆಯುತ್ತಿದೆ’ ಎಂದು ಆರೋಪಿಸಿದ ಅವರು, ‘ಸಂವಿಧಾನದ ತಿದ್ದುಪಡಿ ಕುರಿತು ಮಾತನಾಡಿದ ಸಚಿವರನ್ನು ನೋಡಿಕೊಂಡು ದೇಶದ ಪ್ರಧಾನಿ ಸುಮ್ಮನೇ ಇದ್ದಾರೆ. ಅವರಿಗೆ ನಾಚಿಕೆಯಾಗಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.