ADVERTISEMENT

ಶಾಲೆ ತೊರೆದ ಮಕ್ಕಳಿಗೆ ವರವಾದ ‘ಶಿಕ್ಷಣ ಕಿರಣ’

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST

ನವದೆಹಲಿ: ವಿದ್ಯಾರ್ಥಿಗಳ ಸಾಧನೆಯ ಹೆಜ್ಜೆಗುರುತನ್ನು ಹಿಂಬಾಲಿಸುವ ಮಾಹಿತಿ ತಂತ್ರಜ್ಞಾನ ‌ವ್ಯವಸ್ಥೆ ‘ಶಿಕ್ಷಣ ಕಿರಣ’ದ ಅಡಿಯಲ್ಲಿ ಶಾಲೆ ತೊರೆದ ನಾಲ್ಕು ಲಕ್ಷ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿರುವ ರಾಜ್ಯ ಸರ್ಕಾರ, ಅವರಲ್ಲಿ ಬಹುತೇಕ ಎಲ್ಲರನ್ನೂ ಪುನಃ ಶಾಲೆಗೆ ಕಳಿಸಿದೆ.

ಸೋಮವಾರ ಇಲ್ಲಿ ನಡೆದ ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿಯ 65ನೆಯ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ತನ್ವೀರ್ ಸೇಟ್ ಈ ಸಂಗತಿಯನ್ನು ತಿಳಿಸಿದರು.

ಒಂದರಿಂದ ಹತ್ನನೆಯ ತರಗತಿವರೆಗಿನ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ ಸಾಧನೆಯನ್ನು ‘ಶಿಕ್ಷಣ ಕಿರಣ’ ಯೋಜನೆಯಡಿ ಸತತ ಎರಡನೆಯ ವರ್ಷ ಗಮನಿಸಲಾಗುತ್ತಿದೆ. ಸರ್ಕಾರಿ, ಖಾಸಗಿ, ಅನುದಾನಿತ, ಕೇಂದ್ರೀಯ ಪಠ್ಯ, ರಾಜ್ಯ ಪಠ್ಯವೆಂಬ ಭೇದವಿಲ್ಲದೆ ರಾಜ್ಯದಲ್ಲಿನ ಎಲ್ಲ ಶಾಲೆಗಳ ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ಯೋಜನೆಯಡಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗಿದೆ ಎಂದು ಸೇಟ್‌ ಹೇಳಿದರು.

ADVERTISEMENT

ನಾಲ್ಕು ಲಕ್ಷ ವಿದ್ಯಾರ್ಥಿಗಳು ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲೆಗೆ ಬಂದಿಲ್ಲವೆಂಬುದು ಈ ವ್ಯವಸ್ಥೆಯ ಮೂಲಕ ಪತ್ತೆಯಾಯಿತು. ಆರಂಭದ ತಿಂಗಳಿನಲ್ಲಿಯೇ ಈ ನಿರ್ದಿಷ್ಟ ಮಾಹಿತಿ ಲಭಿಸಿದ್ದು ವಿದ್ಯಾರ್ಥಿಗಳನ್ನು ಪುನಃ ಶಾಲೆಗೆ ಕರೆತರಲು ಬಹಳ ಅನುಕೂಲವಾಯಿತು. ಅಂತೆಯೇ ಎಲ್ಲ ವಿದ್ಯಾರ್ಥಿಗಳೂ ಚೆನ್ನಾಗಿ ಕಲಿಯಬೇಕೆಂಬ ಗುರಿಯ ಅಡಿಯಲ್ಲಿ 2017ರಲ್ಲಿ 16 ಲಕ್ಷ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಯಿತು ಎಂದು ಅವರು ತಿಳಿಸಿದರು.

ಈ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಅವರೆಲ್ಲರಿಗೆ ಬೇಸಿಗೆ ರಜೆಯಲ್ಲಿ ವಿಶೇಷ ಪಾಠದ ಏರ್ಪಾಡು ಮಾಡಲಾಯಿತು. ಈ ಏರ್ಪಾಡಿಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆಯಿತು. ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸಿ ನಾಲ್ಕರಿಂದ ಒಂಬತ್ತನೆಯ ತರಗತಿವರೆಗಿನ 36 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮತ್ತು ಫಲಿತಾಂಶ ಪಟ್ಟಿಗಳ ತಯಾರಿಯನ್ನು ಕೇವಲ 45 ದಿನಗಳ ಒಳಗಾಗಿ ಪೂರ್ಣಗೊಳಿಸಲಾಯಿತು. ‘ರಿಸಲ್ಟ್ ಕಾರ್ಡ್’ಗಳು ಕೂಡ ಸಿದ್ಧವಾಗಿದ್ದು ಆಯಾ ವಿದ್ಯಾರ್ಥಿಯ ಪೋಷಕರಿಗೆ ಕಳಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.