ADVERTISEMENT

3 ತಿಂಗಳ ಕಾಲಾವಕಾಶಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST
3 ತಿಂಗಳ ಕಾಲಾವಕಾಶಕ್ಕೆ ಮನವಿ
3 ತಿಂಗಳ ಕಾಲಾವಕಾಶಕ್ಕೆ ಮನವಿ   

ಬೆಂಗಳೂರು: ‘ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಬಡ್ತಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಕಾಲಾವಕಾಶ ನೀಡುವಂತೆ ಕೋರಿ ಮಂಗಳವಾರ (ಜ.16) ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಲಾಗುವುದು’ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿ‌ದರು.

ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಬಡ್ತಿ ಮೀಸಲಾತಿಗೆ ಸಂಬಂಧಿಸಿದ ಮಸೂದೆ ಕೇಂದ್ರ ಗೃಹ ಇಲಾಖೆಗೆ ಹೋಗಿದೆ. ಕೇಂದ್ರದ ಎಲ್ಲಾ ಇಲಾಖೆಗಳ ಒಪ್ಪಿಗೆ ದೊರೆಯುವ ಅಂತಿಮ ಹಂತದಲ್ಲಿದೆ. ಅನುಮೋದನೆ ದೊರೆತ ಬಳಿಕ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದರು.

ಕಾವೇರಿ ನೀರು ಬಿಡಲು ಸಾಧ್ಯವಿಲ್ಲ: ‘ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಲು ಸಾಧ್ಯವಿಲ್ಲ. ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರು ಕುಡಿಯಲು ಮಾತ್ರ ಸಾಕಾಗುತ್ತದೆ. ರೈತರ ಬೆಳೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ತಮಿಳುನಾಡು ಇದನ್ನು ಅರ್ಥ ಮಾಡಿಕೊಳ್ಳಬೇಕು. ನೀರು ಇದ್ದಾಗ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ. ನಮ್ಮಲ್ಲೇ ನೀರಿಲ್ಲದಿರುವಾಗ ಹೇಗೆ ಬಿಡುವುದು. ನೀರು ಬಿಡುವಂತೆ ಕೋರಿ ತಮಿಳುನಾಡು ಸರ್ಕಾರ ಬರೆದಿರುವ ಪತ್ರದ ಹಿಂದೆ ಬಿಜೆಪಿಯ ಕುಮ್ಮಕ್ಕಿದೆ ಎಂಬ ಆರೋಪವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

ADVERTISEMENT

ಗೋವಾದ ಜಲ ಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಜಯಚಂದ್ರ, ‘ಯಾರೇ ಆಗಿದ್ದರೂ ಆಡುವ ಮಾತಿನ ಮೇಲೆ ಹಿಡಿತವಿರಬೇಕು. ಪಾಲ್ಯೇಕರ್‌ ವಿವಾದಿತ ಸ್ಥಳಕ್ಕೆ ಬಂದಿದ್ದೇ ಮೊದಲ ತಪ್ಪು.  ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ಉತ್ತಮ ಸಂಬಂಧವಿದೆ. ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಸಚಿವ ಸಂಪುಟದಲ್ಲಿ ದಿನಾಂಕ ನಿಗದಿಪಡಿಸಲಾ
ಗುವುದು’ ಎಂದು ಹೇಳಿದರು.

ಮಗನ ಸ್ಪರ್ಧೆ ಹೈಕಮಾಂಡ್‍ ತೀರ್ಮಾನ

‘ನನ್ನ ಮಗ ಸಂತೋಷ್‌ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬುದು ಜನರ ಅಪೇಕ್ಷೆ. ಸಂತೋಷ್‌ ಈಗಾಗಲೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನ ಸ್ಪರ್ಧೆ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ’ ಎಂದು ಜಯಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.